ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಟಿಕೆಟ್ ವಿಚಾರವಾಗಿ ನಡೆದ ವಾಗ್ವಾದದಲ್ಲಿ ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಕನ್ವಾರಿಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯೋಧನೊಬ್ಬ ಬ್ರಹ್ಮಪುತ್ರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಲು ಹೊರಟಿದ್ದ ಸಂದರ್ಭದಲ್ಲಿ, ಜಾರ್ಖಂಡ್‌ನ ಬೈದ್ಯನಾಥ ಧಾಮಕ್ಕೆ ತೆರಳುತ್ತಿದ್ದ ಕನ್ವಾರಿಯರು ಅದೇ ರೈಲಿಗೆ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಟಿಕೆಟ್ ಖರೀದಿ ಸಂಬಂಧ ವಾಗ್ವಾದ ಉಂಟಾಗಿ, ಅದು ಹಲ್ಲೆಗೆ ಕಾರಣವಾಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ಜಿಆರ್‌ಪಿ ಇನ್‌ಸ್ಪೆಕ್ಟರ್ ರಾಘವೇಂದ್ರ ಸಿಂಗ್ ಅವರು, ಸ್ಥಳದಲ್ಲಿ ನಿಯೋಜಿಸಲಾದ ಸಿಬ್ಬಂದಿ ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದ್ದರೆಂದು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಸಿಆರ್‌ಪಿಎಫ್ ಯೋಧನಿಗೆ ಸಹಾಯ ನೀಡಲಾಯಿತು. ಅವರು ತಮ್ಮ ಕರ್ತವ್ಯಕ್ಕಾಗಿ ಮಣಿಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಜಿಆರ್‌ಪಿ ಕನ್ವಾರಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), ಸೆಕ್ಷನ್ 352 (ಉದ್ದೇಶಪೂರ್ವಕ ಹಲ್ಲೆ), ಹಾಗೂ ರೈಲ್ವೆ ಕಾಯ್ದೆಯ ವಿವಿಧ ಧಾರಣೆಯಡಿಯಲ್ಲಿ ಪ್ರಕರಣ ದಾಖಲಿಸಿ ಅನಂತರ, ಬಂಧಿತ ಕನ್ವಾರಿಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜಿಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.
PublicNext
20/07/2025 06:59 pm