ಶಿರಸಿ: ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ಏರ್ ಗನ್ ನಿಂದ ಗುಂಡು ಸಿಡಿದು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಮೃತ ಬಾಲಕನ ಪೋಷಕರು ಮೂಲತ: ಹಾವೇರಿ ಜಿಲ್ಲೆಯ ಹೊಸ ಕಿತ್ತೂರ ಗ್ರಾಮದವರಾಗಿದ್ದು, ಬಾಲಕನು ಬಸಪ್ಪ ಉಂಡಿ ಎಂಬವರ ಪುತ್ರನಾಗಿದ್ದಾನೆ.
ಈ ಕುಟುಂಬವು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ರಾಘವ ಹೆಗಡೆಯವರ ಮನೆ ಕಾಯ್ದುಕೊಂಡು ತೋಟದ ಕೆಲಸ ಕಾರ್ಯ ಮಾಡುತ್ತಿದ್ದರು. ಈ ದಂಪತಿಗೆ ಮೂವರು ಮಕ್ಕಳು. ಅವರಲ್ಲಿ ಒಬ್ಬಳು ಪುತ್ರಿ, ಇಬ್ಬರು ಪುತ್ರರು.
ಈ ಮಕ್ಕಳು ಇಂದು ಶುಕ್ರವಾರ ರಜೆಯಿದ್ದ ಹಿನ್ನೆಲೆಯಲ್ಲಿ ಮಾಲಕರ ಮನೆ ಆವರಣದಲ್ಲಿ ಆಟವಾಡುತ್ತಿದ್ದರು. ಇದೇ ಸಂದರ್ಭದಲ್ಲಿ ರಾಘವ ಹೆಗಡೆಯವರ ತೋಟ ಕಾಯಲು ಬಂದಿದ್ದ ನಿತೀಶ ಎಂಬವರು ಏರ್ ಗನ್ ಹೆಗಲಿಗೆ ಹಾಕಿಕೊಂಡು ಗೇಟಿನ ಹತ್ತಿರ ಬಂದು ನಿಂತಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳು ಆಟವಾಡುತ್ತಾ, ನಿತೀಶ್ ನಿಂತಿದ್ದ ಗೇಟ್ ದಾಟಿ ಬಂದು ಹಿಂದಿನಿಂದ ಏರ್ ಗನ್ ಬಟನ್ ಒತ್ತಿದ್ದರಿಂದ ಗೇಟಿನ ಮುಂಭಾಗದಲ್ಲಿದ್ದ ಬಾಲಕ ಕರಿಯಪ್ಪನಿಗೆ ತಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
PublicNext
05/09/2025 10:17 pm