ದಾಂಡೇಲಿ: ಪಟ್ಟಣದ ಹಾಲಮಡ್ಡಿ ಯುಜಿಡಿ ಟ್ಯಾಂಕ್ ಹತ್ತಿರ, ಕಾಗದ ಕಂಪನಿಯ ಇಟಿಪಿ ಪ್ಲಾಂಟ್‌ಗೆ ಹೋಗುವ ರಸ್ತೆಯ ಬಳಿ ಭಯಾನಕ ದೃಶ್ಯವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ವಿದ್ಯುತ್ ದೀಪದ ಬೆಳಕಿನಲ್ಲಿ ಮೊಸಳೆಯೊಂದು ಜನವಸತಿ ಪ್ರದೇಶದಲ್ಲೇ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಎಮ್ಮೆಗೆಯ ಮೇಲೆ ದಾಳಿ ನಡೆಸಲು ಮೊಸಳೆಯೊಂದು ಹೊಂಚು ಹಾಕುತ್ತಿದ್ದ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ತಕ್ಷಣ ಧೈರ್ಯ ತೋರಿ ಮೊಸಳೆಯನ್ನು ಓಡಿಸಿ, ಎಮ್ಮೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಎಮ್ಮೆ ಮೊಸಳೆಯ ಬಾಯಿಗೆ ಆಹುತಿಯಾಗುತ್ತಿತ್ತು ಎನ್ನಲಾಗಿದೆ.
ಈ ಸ್ಥಳದಲ್ಲೇ ಕೆಲ ದಿನಗಳ ಹಿಂದೆ ಮೊಸಳೆ ಅಕಳನ್ನು ಹಿಡಿದು ತಿಂದ ಘಟನೆ ನಡೆದಿತ್ತು. ಇದೀಗ ಮತ್ತೊಮ್ಮೆ ಮೊಸಳೆ ಕಾಣಿಸಿಕೊಂಡಿರುವುದು ನಾಗರಿಕರಲ್ಲಿ ಭೀತಿಯನ್ನು ಹೆಚ್ಚಿಸಿದೆ.
ಇತ್ತೀಚಿನ ದಿನಗಳಲ್ಲಿ ಮೊಸಳೆಗಳು ನದಿಯನ್ನು ಬಿಟ್ಟು ಜನವಸತಿ ಪ್ರದೇಶಗಳತ್ತ ಬರುತ್ತಿರುವುದು ಹೆಚ್ಚುತ್ತಿದ್ದು, ನದಿ ದಂಡೆಯಲ್ಲಿ ವಾಸಿಸುತ್ತಿರುವ ನಾಗರಿಕರು ಆತಂಕದ ಜೀವನ ನಡೆಸುತ್ತಿದ್ದಾರೆ.
PublicNext
09/09/2025 01:14 pm