ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ನಮ್ಮ ಸರಕಾರಕ್ಕೆ ಶಿಕ್ಷಕರ ಬಗ್ಗೆ ವಿಶೇಷ ಕಾಳಜಿ - ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೆ ಶಿಕ್ಷಕ ಸಮೂಹದ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವವಿದೆ. ಶಿಕ್ಷಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬೆಳಗಾವಿ ತಾಲೂಕು ಪಂಚಾಯತ್ ವತಿಯಿಂದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಬೆಳಗಾವಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸಚಿವ ಸಂಪುಟ ಸಭೆಗಳಲ್ಲಿ ಶಿಕ್ಷಣ ಕ್ಷೇತ್ರದ ವಿಷಯ ಬಂದರೆ ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸುವುದನ್ನು ನಾನು ಗಮನಿಸಿದ್ದೇನೆ ಎಂದರು.

ನಾವು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ತಂದೆ ತಾಯಿ ಬಿಟ್ಟರೆ ಶಿಕ್ಷಕರೇ ಕಾರಣ. ನಾನು ಯಾವತ್ತೂ ಶಿಕ್ಷಣ, ಆರೋಗ್ಯ ಹಾಗೂ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ. ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ ಗುರು ಭವನದ ಅವಶ್ಯಕತೆ ಇದೆ ಅಂತ ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ‌ ತಳವಾರ್ ಮನವಿ ಮಾಡಿದ್ದರು. ಸೆಪ್ಟೆಂಬರ್ 5 ರೊಳಗೆ ಜಾಗವನ್ನು ಮಂಜೂರು ಮಾಡಿಸಿಕೊಡುವುದಾಗಿ ಮಾತು ಕೊಟ್ಟಿದ್ದೆ. ಇದೀಗ ಕೊಟ್ಟ ಮಾತನ್ನು ನಡೆಸಿಕೊಟ್ಟಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.‌

ಮಹಿಳೆ ಇಂದು ಮುಖ್ಯ ವಾಹಿನಿಗೆ ಬಂದಿದ್ದಾಳೆ. ಪುರುಷರ ಸಹಕಾರ ಇರುವುದರಿಂದಲೇ ಮಹಿಳೆ ಇಂದು ಬೆಳೆದಿದ್ದಾಳೆ. ಹೆಂಡತಿ, ಮಗಳು, ತಂಗಿ ಹೀಗೆ ಎಲ್ಲರಿಗೂ ಪುರುಷರು ಬೆಂಬಲ ನೀಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಾನವಾಗಿ ಬೆಳೆದಿದ್ದಾರೆ. ಇದು ಖುಷಿಯ ಸಂಗತಿ ಎಂದರು.

ನಾನು ಆರನೇ ತರಗತಿಯಲ್ಲಿದ್ದಾಗ ದೇಶಪಾಂಡೆ ಸರ್ ಅವರು ನನಗೆ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದರು. ಅವರು ಕೇವಲ ಆಟ ಆಡಿಸುವುದಕ್ಕಷ್ಟೇ ಸೀಮಿತವಾಗದೇ, ಮಕ್ಕಳಿಗೆ ಭಾಷಣವನ್ನು ಬರೆದುಕೊಟ್ಟು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಷಣ ಮಾಡಿಸುತ್ತಿದ್ದರು. ಅದೇ ನನ್ನ ಜೀವನಕ್ಕೆ ಸ್ಫೂರ್ತಿ ಆಯಿತು ಎಂದು ಸಚಿವರು ಸ್ಮರಿಸಿದರು.

ರಾಷ್ಟ್ರದ ಭವ್ಯ ಭವಿಷ್ಯ ನಿರ್ಮಾಣ ಮಾಡುವ ದಿಸೆಯಲ್ಲಿ ಮಕ್ಕಳನ್ನು ಸಿದ್ಪಡಿಸುವ ಮಹತ್ಕಾರ್ಯದಲ್ಲಿ ತೊಡಗಿಕೊಂಡಿರುವ ಈ ಸಮಾಜದ ಆದರ್ಶ ನಮ್ಮೆಲ್ಲ ಶಿಕ್ಷಕರು. ನಮ್ಮ ಶಿಕ್ಷಕರ ಸೇವೆ ಶ್ಲಾಘನೀಯ, ಭಾರತ ವಿಶ್ವದ ನಂಬರ್ 1 ಸ್ಥಾನಕ್ಕೆ ಬರಲು ‌ಶಿಕ್ಷಕರೇ ಕಾರಣ. ದೇಶದ ಪ್ರಗತಿಯಲ್ಲಿ ರೈತರು, ಯೋಧರು, ಶಿಕ್ಷಕರೇ ಪ್ರಮುಖ ಕಾರಣ. ಐಎಎಸ್‌ ಅಧಿಕಾರಿಗಳು, ವಿಜ್ಞಾನಿಗಳಾದರೂ ಅವರಿಗೆ ಶಿಕ್ಷಕರು ನೀಡಿದ ಜ್ಞಾನವೇ ಅದಕ್ಕೆ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೂ ಶಿಕ್ಷಕರ ಮೇಲೆ ವಿಶೇಷ ಪ್ರೀತಿ, ಕಾಳಜಿ ಇದೆ. ಶಿಕ್ಷಕರಿಗೆ ಗೌರವ ಕೊಟ್ಟು, ಕೊಟ್ಟ ಮಾತಿನಂತೆ ಮಹಾನಗರ ವ್ಯಾಪ್ತಿಯಲ್ಲಿ ಗುರುಭವನ ನಿರ್ಮಾಣಕ್ಕಾಗಿ 17 ಗುಂಟೆ ಜಾಗವನ್ನು ಮಂಜೂರು ಮಾಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಿ ಆ್ಯಂಡ್ ಆರ್ ರೂಲ್ಸ್ , ಗುರುಭವನಕ್ಕೆ ಜಾಗ ಸೇರಿದಂತೆ ಶಿಕ್ಷಕರ ಪರವಾಗಿ ಬಹಳಷ್ಟು ಕೊಡುಗೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿ, ಶಿಕ್ಷಕರ ಸಂಘದ ಪರವಾಗಿ ಸಚಿವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಈ ವೇಳೆ‌ ಬೆಳಗಾವಿ ರಾಮಕೃಷ್ಣ ಆಶ್ರಮದ‌ ಮೋಕ್ಷಾನಂದ ಸ್ವಾಮೀಜಿ, ವಿಧಾನ‌ ‌ಪರಿಷತ್ ಸದಸ್ಯರಾದ ಡಾ.ಸಾಬಣ್ಣ ತಳವಾರ್, ಡಿಡಿಪಿಐ ಲೀಲಾವತಿ ಹಿರೇಮಠ, ಬಿಇಒ ಆಂಜನೇಯ, ಸಾಹಿತಿ ಡಾ. ರಾಮಕೃಷ್ಣ ಮರಾಠೆ, ನೌಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ರಾಯಪ್ಪಗೋಳ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಮೇದಾರ್, ಜಯಕುಮಾರ್ ಹೆಬಳಿ, ಬಸವರಾಜ್ ನಲತವಾಡ‌ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ‌

Edited By :
PublicNext

PublicNext

09/09/2025 07:32 pm

Cinque Terre

7.27 K

Cinque Terre

0