ಗುಜರಾತ್: ಗುಜರಾತ್‌ನ ಜಾಮ್‌ನಗರದಲ್ಲಿ ಅತ್ಯಂತ ಜನನಿಬಿಡ ರಸ್ತೆಯೊಂದರ ಮಧ್ಯಭಾಗದಲ್ಲೇ ಬೃಹತ್ ಜಾಹೀರಾತು ಗೋಪುರವೊಂದು ಇದ್ದಕ್ಕಿದ್ದಂತೆ ಧರಾಶಾಹಿಯಾಗಿದೆ. ಈ ಮೈ ನಡುಗಿಸುವ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದಿನದ ಬಹುಪಾಲು ಸಮಯ ವಾಹನಗಳು ಮತ್ತು ಜನರಿಂದ ತುಂಬಿರುತ್ತಿದ್ದ ಮುಖ್ಯ ರಸ್ತೆಯ ಪಕ್ಕದಲ್ಲೇ ಅಳವಡಿಸಲಾಗಿದ್ದ ಈ ಬೃಹತ್ ಜಾಹೀರಾತು ಗೋಪುರ, ಮಧ್ಯಾಹ್ನದ ವೇಳೆಗೆ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯಭಾಗಕ್ಕೇ ಕುಸಿದುಬಿದ್ದಿದೆ. ಈ 'ಕಬ್ಬಿಣದ ರಾಕ್ಷಸ' ನೆಲಕ್ಕೆ ಉರುಳುತ್ತಿದ್ದ ದೃಶ್ಯವನ್ನು ಕಂಡು ರಸ್ತೆಯಲ್ಲಿದ್ದ ಸಾರ್ವಜನಿಕರು ಮತ್ತು ಅಂಗಡಿಕಾರರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
ಸಾಮಾನ್ಯವಾಗಿ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುತ್ತದೆ. ಆದರೆ, ಘಟನೆ ನಡೆದದ್ದು ಮಧ್ಯಾಹ್ನದ ವೇಳೆಯಾದ್ದರಿಂದ ರಸ್ತೆಯಲ್ಲಿ ವಾಹನಗಳ ಹಾಗೂ ಜನರ ಓಡಾಟ ತೀರಾ ವಿರಳವಾಗಿತ್ತು. ಒಂದು ವೇಳೆ ಬೆಳಗಿನ ಅವಧಿಯಲ್ಲೋ ಅಥವಾ ಸಂಜೆಯ ಪೀಕ್ ಅವರ್‌ನಲ್ಲೋ ಈ ಬೃಹತ್ ಗೋಪುರ ಬಿದ್ದಿದ್ದರೆ, ಹಲವು ವಾಹನಗಳು ಹಾಗೂ ಸಾರ್ವಜನಿಕರು ಇದರಡಿ ಸಿಲುಕಿ ದೊಡ್ಡ ಮಟ್ಟದ ರಕ್ತಪಾತವೇ ನಡೆದುಹೋಗುತ್ತಿತ್ತು.
ಗೋಪುರ ಕುಸಿದ ರಭಸಕ್ಕೆ ಆ ಭಾಗದಲ್ಲಿ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇಷ್ಟು ದೊಡ್ಡ ಗಾತ್ರದ ಜಾಹೀರಾತು ಫಲಕಗಳನ್ನು ರಸ್ತೆ ಬದಿಯಲ್ಲಿ ಅಳವಡಿಸುವಾಗ ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಧಾವಿಸಿರುವ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ, ಕ್ರೇನ್ ಮೂಲಕ ರಸ್ತೆಗೆ ಬಿದ್ದಿರುವ ಕಬ್ಬಿಣದ ಅವಶೇಷಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಹೋಲ್ಡಿಂಗ್ ಕುಸಿತದ ದುರಂತದ ಬಳಿಕವೂ ಇಂತಹ ದೈತ್ಯ ಜಾಹೀರಾತು ಫಲಕಗಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
PublicNext
31/05/2026 05:46 pm