ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಮಕೃಷ್ಣ ಮಠ ವಿಸರ್ಜನೆ ಅಭಿಯಾನಕ್ಕೆ ಭಾರೀ ಸ್ಪಂದನೆ- 5.51ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹ

ಮಂಗಳೂರು: ಧಾರ್ಮಿಕ ತ್ಯಾಜ್ಯವನ್ನು ಗೌರವದಿಂದ ವಿಲೇವಾರಿ ಮಾಡಲು ಮಂಗಳೂರು ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್, ಸ್ವಚ್ಛ ಮಂಗಳೂರು ಪ್ರತಿಷ್ಠಾನದ ವಿಸರ್ಜನೆ ಅಭಿಯಾನಕ್ಕೆ ಮಂಗಳೂರು ಜನತೆಯಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಈ ಅಭಿಯಾನದಲ್ಲಿ 5.51ಟನ್ ಧಾರ್ಮಿಕ ತ್ಯಾಜ್ಯ ಸಂಗ್ರಹವಾಗಿದೆ.

ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನ, ಫೋರಂ ಫಿಝಾ ಮಾಲ್, ಸಿಟಿ ಸೆಂಟರ್ ಮಾಲ್, ಸುರತ್ಕಲ್ ಗೋವಿಂದದಾಸ ಕಾಲೇಜು ಆವರಣದಲ್ಲಿ ಧಾರ್ಮಿಕ ವಸ್ತುಗಳ ಸಂಗ್ರಹಕ್ಕೆ 'ವಿಸರ್ಜನೆ' ಬಾಕ್ಸ್ ಇಡಲಾಗಿತ್ತು.

ಮಾ.16ರಿಂದ ಮಾ.26ರ ವರೆಗೆ ನಡೆದ ಈ ಸಂಗ್ರಹ ಕಾರ್ಯದಲ್ಲಿ 5 ಸಾವಿರಕ್ಕೂ ಅಧಿಕ ದೇವರ ಫೋಟೊಗಳು, 200ಕ್ಕೂ ಅಧಿಕ ಧಾರ್ಮಿಕ ಪುಸ್ತಕಗಳು, 5 ಕೆ.ಜಿ.ಗೂ ಅಧಿಕ ಕುಂಕುಮ ಸೇರಿದಂತೆ ಇತರ ಪ್ರಸಾದಗಳು, ಮರ, ದೇವರ ಮಂಟಪ, ಕಂಚು, ತಾಮ್ರ, ವಸ್ತುಗಳು, ಮೂರ್ತಿಗಳು ಸಂಗ್ರಹವಾಗಿದೆ. ಸುಮಾರು 300ಕ್ಕೂ ಅಧಿಕ ಗೋಣಿ ಚೀಲದಲ್ಲಿ ಈ ಧಾರ್ಮಿಕ ತ್ಯಾಜ್ಯಗಳನ್ನು ಸಂಗ್ರಹಿಸಲಾಗಿದೆ.

ಬೈಟ್: ದಿಲ್‌ರಾಜ್ ಆಳ್ವ, ಸ್ವಚ್ಛ ಮಂಗಳೂರು ಪ್ರತಿಷ್ಠಾನ ಟ್ರಸ್ಟಿ

ಹೀಗೆ ಸಂಗ್ರಹವಾದ ಧಾರ್ಮಿಕ ತ್ಯಾಜ್ಯಗಳನ್ನು ಪೋಟೊಗಳು, ಗ್ಲಾಸ್, ಪೋಟೊಫ್ರೇಮ್, ವಿದೌಟ್ ಗ್ಲಾಸ್ ಫೋಟೊಗಳು, ಧಾರ್ಮಿಕ ವಸ್ತಗಳು, ಸ್ಮರಣಿಕೆಗಳು, ಮೂರ್ತಿಗಳು, ಹರಿದ ಪುಸ್ತಕಗಳು, ಕಂಚು- ತಾಮ್ರದ ಸೊತ್ತುಗಳು, ಪ್ರಸಾದಗಳು, ಮರದ ವಸ್ತುಗಳು ಎಂದು ವಿವಿಧ ವಿಧಗಳಾಗಿ ವಿಂಗಡಿಸಲಾಗುತ್ತಿದೆ. ಈ ವಿಂಗಡಣೆ ಕಾರ್ಯವನ್ನು ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಬಳಿಕ ಮರುಬಳಕೆ ಮಾಡುವ ವಸ್ತುಗಳನ್ನು ಮರುಬಳಕೆ ಉತ್ಪನ್ನ ಘಟಕಕ್ಕೆ ಕಳುಹಿಸಲಾಗುವುದು.

ವಿಸರ್ಜನೆ ಮಾಡಬೇಕಾದ ಧಾರ್ಮಿಕ ವಸ್ತುಗಳನ್ನು ಅಂತಿಮ ವಿಲೇವಾರಿಗೆ ಮೊದಲು ಮಂಗಳಾದೇವಿ ದೇವಸ್ಥಾನದ ಅರ್ಚಕರಿಂದ 'ಉದ್ವಾಸನ ಪೂಜೆ' ನೆರವೇರಿಸಲಾಗುತ್ತದೆ. ಬಳಿಕ ವಿಲೇವಾರಿ ಮಾಡುವ ವಸ್ತುಗಳನ್ನು ಕದ್ರಿ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ನಿಗದಿ ಪಡಿಸಿದ ಜಾಗದಲ್ಲಿ ತೆಗೆದ ಗುಂಡಿಯಲ್ಲಿ ಅದನ್ನು ಹಾಕಿ ಮಣ್ಣು ಮುಚ್ಚಲಾಗುತ್ತದೆ‌. ಬಳಿಕ ಅದರ ಮೇಲೊಂದು ತುಳಸಿ ಗಿಡವನ್ನು ನೆಡಲಾಗುತ್ತದೆ.

ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು

Edited By :
PublicNext

PublicNext

01/04/2026 08:55 pm

Cinque Terre

21.15 K

Cinque Terre

0