ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಎಲ್‌ಪಿಜಿ (LPG) ಅನಿಲ ಸಮಸ್ಯೆಯ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ದೇವನಹಳ್ಳಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಗ್ಯಾಸ್ ವಿತರಣೆಯಲ್ಲಿ ಯಾವುದೇ ಗಂಭೀರ ವ್ಯತ್ಯಯವಾಗಿಲ್ಲ, ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
"ಜಾಗತಿಕ ಮಟ್ಟದಲ್ಲಿ ಯುದ್ಧದ ವಾತಾವರಣವಿರುವುದರಿಂದ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಚುನಾವಣೆ ನೀತಿ ಸಂಹಿತೆಯ ಕಾರಣದಿಂದ ಅಧಿಕಾರಿಗಳ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಬರುವ ಏಪ್ರಿಲ್ 5ರಂದು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಪರಿಶೀಲಿಸಲಾಗುವುದು"
ಪ್ರಸ್ತುತ ನಗರ ಪ್ರದೇಶಗಳಲ್ಲಿ ಪ್ರತಿ 25 ದಿನಕ್ಕೊಮ್ಮೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಪ್ರತಿ 45 ದಿನಕ್ಕೊಮ್ಮೆ ಸಿಲಿಂಡರ್ ವಿತರಿಸಲಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆ ಅಥವಾ ತೊಂದರೆ ಇಲ್ಲ. "ದಿನಕ್ಕೆ ಸುಮಾರು 3 ಸಾವಿರ ಆಟೋ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ. ಈ ಮೊದಲು ಆಟೋ ಚಾಲಕರು ಖಾಸಗಿ ಕಂಪನಿಗಳಿಂದ ಅನಿಲ ಪಡೆಯುತ್ತಿದ್ದರು. ಈಗ ಅಲ್ಲಿ ದರ ಹೆಚ್ಚಾದ ಕಾರಣ ಸರ್ಕಾರಿ ಬಂಕ್‌ಗಳಿಗೆ ಬರುತ್ತಿದ್ದಾರೆ. ಹೀಗಾಗಿ ಸಣ್ಣ ಮಟ್ಟದ ಒತ್ತಡ ಕಂಡುಬಂದಿದೆ" ಎಂದರು.
"ಸರ್ಕಾರಿ ಕಂಪನಿಗಳ ಗ್ರಾಹಕರಿಗೆ ಯಾವುದೇ ತೊಂದರೆಯಾಗಿಲ್ಲ. ಖಾಸಗಿ ಕಂಪನಿಗಳೂ ಸಹ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಅಕ್ರಮವಾಗಿ ದರ ಹೆಚ್ಚಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದರು.
"ಸದ್ಯ ಲಭ್ಯವಿರುವ ಸಂಪನ್ಮೂಲವನ್ನು ಸಾರ್ವಜನಿಕರು ಮಿತವಾಗಿ ಬಳಸಬೇಕು. ಅನಿಲ ಕೊರತೆಯ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು" ಎಂದು ಕಿವಿಮಾತು ಹೇಳಿದರು.
PublicNext
02/04/2026 08:23 pm