ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾವೇರಿ ದಡದಲ್ಲಿ ಪತ್ತೆ

ನಾಪೋಕ್ಲು: ಉಡುಪಿ ಜಿಲ್ಲೆಯ ಕುಂದಾಪುರದಿಂದ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆಂದು ತೆರಳಿ ನಾಪೋಕ್ಲು ಬಳಿಯ ಎಮ್ಮೆಮಾಡು ದರ್ಗಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಎಮ್ಮೆಮಾಡು ಗ್ರಾಮದ ಕಾವೇರಿ ನದಿಯ ದಡದಲ್ಲಿ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಕುರ್ಕಂಜೆ ಗ್ರಾಮದ ನಿವಾಸಿ ಹಸೈನಾರ್ ಸಾಹೇಬ್ (65) ಮೃತ ದುರ್ದೈವಿ. ಮೃತ ಹಸೈನಾರ್ ಏಪ್ರಿಲ್ 13 ರಂದು ಕುಂದಾಪುರದಿಂದ ಸಂಬಂಧಿಕರೊಂದಿಗೆ ದರ್ಗಾ ಪ್ರವಾಸಕ್ಕೆ ತೆರಳಿದ್ದರು. ಏಪ್ರಿಲ್ 15ರಂದು ರಾತ್ರಿ 11.30ಗಂಟೆಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮಕ್ಕೆ ತಲುಪಿದ್ದರು. ಎಮ್ಮೆಮಾಡುವಿನಲ್ಲಿ ರೂಮ್ ಸಿಗದ ಕಾರಣ ಮಸೀದಿಯ ಆವರಣದಲ್ಲಿ ಹಸೈನಾರ್ ಮಲಗಿದ್ದರು. ರಾತ್ರಿ ಮಲಗಿದ್ದ ಜಾಗದಲ್ಲಿ ಹಸೈನಾರ್ ಅವರು ಕಾಣದೆ ಇದ್ದ ಕಾರಣ ಸಂಬಂಧಿಕರು ಇವರನ್ನು ಹುಡುಕಾಡಿದ್ದರು. ಬಳಿಕ ಮಸೀದಿಯ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಮಸೀದಿಯ ಮುಖ್ಯ ದ್ವಾರದ ಗೇಟಿನ ಮುಖಾಂತರ ಹಸೈನಾರ್ ಹೊರ ತೆರಳುವ ದೃಶ್ಯ ಸೆರೆ ಯಾಗಿತ್ತು. ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಹಸೈನಾರ್ ಪತ್ತೆಗೆ ಎಮ್ಮೆಮಾಡು ಗ್ರಾಮಸ್ಥರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಬಳಿಕ ಏಪ್ರಿಲ್ 16ರಂದು ಸಂಬಂಧಿಕರು ನಾಪೋಕ್ಲು ಠಾಣೆಗೆ ಹಸೈನಾರ್ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಹಸೈನಾರ್ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದರು. ಅದರಂತೆ ಏಪ್ರಿಲ್ 19ರಂದು ಎಮ್ಮೆಮಾಡು ಗ್ರಾಮಸ್ಥರು ಹಾಗೂ ಪೊಲೀಸರು ನಡೆಸಿದ ಶೋಧ ಕಾರ್ಯದಲ್ಲಿ ಎಮ್ಮೆಮಾಡು ಗ್ರಾಮದ ಕಾವೇರಿ ನದಿ ದಡದ ಪೊದೆಯಲ್ಲಿ ಹಸೈನಾರ್ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Edited By :
PublicNext

PublicNext

20/04/2026 01:17 pm

Cinque Terre

11.68 K

Cinque Terre

0