ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ತಲೆಯಲ್ಲಿ ಮಚ್ಚು ಸಿಲುಕಿದ್ದರೂ ತಾನೇ ಆಸ್ಪತ್ರೆಗೆ ಬಂದ ಯುವಕ! ಮುಂಬೈನಲ್ಲಿ ಭೀಕರ ಘಟನೆ

ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕ ಮೂಡಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬನಿಂದ ಮಾರಣಾಂತಿಕ ದಾಳಿಗೊಳಗಾದ ಯುವಕನೊಬ್ಬ, ತನ್ನ ತಲೆಯಲ್ಲಿ ಮಚ್ಚು (ಕೊಯತಾ) ಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲೇ ಸಮಾಧಾನವಾಗಿ ನಡೆದುಕೊಂಡು ಆಸ್ಪತ್ರೆಗೆ ಬಂದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ಮುಂಬೈನ ಸಿಯೋನ್ ಆಸ್ಪತ್ರೆಯ (Sion Hospital) ಆವರಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಕಂಡುಬರುವಂತೆ, ಯುವಕನ ತಲೆಯ ಹಿಂಭಾಗದಲ್ಲಿ ಚೂಪಾದ ಮಚ್ಚು ಆಳವಾಗಿ ಇಳಿದಿದೆ. ಇಷ್ಟೊಂದು ಭೀಕರ ಗಾಯವಾಗಿದ್ದರೂ, ಆತ ಯಾವುದೇ ಆತಂಕವಿಲ್ಲದೆ ಆಸ್ಪತ್ರೆಯೊಳಗೆ ಓಡಾಡುತ್ತಿರುವುದು ಮತ್ತು ತನ್ನ ಮೊಬೈಲ್ ಫೋನ್ ನೋಡುತ್ತಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೀದಿಯಲ್ಲಿ ಜಗಳ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಅಪರಿಚಿತ ಹಲ್ಲೆಕೋರನು ಮಚ್ಚಿನಿಂದ ತಲೆಗೆ ಬಲವಾಗಿ ಏಟು ನೀಡಿದ್ದು, ಅದು ತಲೆಯಿಂದ ಹೊರಬರದೆ ಅಲ್ಲಿಯೇ ಸಿಲುಕಿಕೊಂಡಿದೆ. ಘಟನೆಯ ನಂತರ ಆತ ಯಾರಿಗೂ ಕಾಯದೆ ತಾನೇ ಸ್ವತಃ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದಾನೆ.

ಮುಂಬೈನ ಬೀದಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಸಾರ್ವಜನಿಕ ಸುರಕ್ಷತೆಯ ಬಗ್ಗೆ ನಾಗರಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

"ಇಷ್ಟು ದೊಡ್ಡ ಗಾಯವಾದರೂ ಆತ ಪ್ರಜ್ಞೆ ತಪ್ಪದೆ ನಡೆದಾಡುತ್ತಿರುವುದು ಪವಾಡವೇ ಸರಿ. ಆದರೆ ಮುಂಬೈನಲ್ಲಿ ಈ ರೀತಿ ಸಾರ್ವಜನಿಕವಾಗಿ ಹಲ್ಲೆ ನಡೆಯುತ್ತಿರುವುದು ಆತಂಕಕಾರಿ," ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಸದ್ಯ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹಲ್ಲೆ ನಡೆಸಿದ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ದಾಳಿಗೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸದ್ಯ ಯುವಕನಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Edited By : Nagaraj Tulugeri
PublicNext

PublicNext

04/05/2026 04:14 pm

Cinque Terre

13.45 K

Cinque Terre

0