ಚೆನ್ನೈ : ತಮಿಳುನಾಡು ಸೇರಿದಂತೆ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಇಂದು (ಮೇ 4), ನಟಿ ತ್ರಿಷಾ ಕೃಷ್ಣನ್ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಕತಾಳೀಯವೆಂಬಂತೆ, ಇಂದು ತ್ರಿಷಾ ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ವೇಳೆ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ನಟ ವಿಜಯ್ (TVK Vijay) ನೇತೃತ್ವದ ಪಕ್ಷದ ಗೆಲುವಿಗಾಗಿ ತ್ರಿಷಾ ಪ್ರಾರ್ಥಿಸಿದ್ದಾರೆ ಎಂದು ಅಭಿಮಾನಿಗಳು ದೃಢವಾಗಿ ಹೇಳುತ್ತಿದ್ದಾರೆ.
ನಟಿ ತ್ರಿಷಾ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚುನಾವಣಾ ಫಲಿತಾಂಶದ ನಿರ್ಣಾಯಕ ದಿನದಂದೇ ತ್ರಿಷಾ ತಿರುಪತಿಗೆ ಭೇಟಿ ನೀಡಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಇದಕ್ಕೂ ಮುನ್ನ ಮಾರ್ಚ್‌ನಲ್ಲಿ, ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಒಂದೇ ರೀತಿಯ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗಮನಾರ್ಹ ಸಂಗತಿಯೆಂದರೆ, ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ 3,579 ಪುರುಷರು ಮತ್ತು 443 ಮಹಿಳಾ ಅಭ್ಯರ್ಥಿಗಳಿದ್ದರು.
ಒಟ್ಟು 84.69% ಮತದಾನ ದಾಖಲಾಗಿತ್ತು. ರಾಜ್ಯದಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳ ಬಹುಮತ ಅಗತ್ಯವಿದೆ. ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ ಮತ್ತು ಎನ್‌ಟಿಕೆ ಪಕ್ಷಗಳು ಈ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ, 10 ವರ್ಷಗಳ ಎಐಎಡಿಎಂಕೆ (AIADMK) ಆಡಳಿತವನ್ನು ಕೊನೆಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತ್ತು. ಡಿಎಂಕೆ ಮೈತ್ರಿಕೂಟವು ಒಟ್ಟು 159 ಸ್ಥಾನಗಳನ್ನು ಗಳಿಸಿತ್ತು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು). ಎಐಎಡಿಎಂಕೆ ಮೈತ್ರಿಕೂಟವು 75 ಸ್ಥಾನಗಳನ್ನು ಗಳಿಸಿತ್ತು.
PublicNext
04/05/2026 11:33 am