ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಬಲ್ಪುರ್ ಕ್ರೂಸ್ ಬೋಟ್ ದುರಂತ - ಸಾವಿನ ಸಂಖ್ಯೆ 13ಕ್ಕೆ ಏರಿಕೆ, ಎಲ್ಲ ಮೃತದೇಹ ಪತ್ತೆ

ಜಬಲ್ಪುರ್: ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಬಾರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ್ದ ಕ್ರೂಸ್ ಬೋಟ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ರವಿವಾರ 13ಕ್ಕೆ ಏರಿಕೆಯಾಗಿದ್ದು, ನಾಪತ್ತೆಯಾಗಿದ್ದ ಎಲ್ಲ ವ್ಯಕ್ತಿಗಳ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿವಾರ ಬೆಳಗ್ಗೆ ಐದು ವರ್ಷದ ಬಾಲಕ ಹಾಗೂ ಆತನ ಚಿಕ್ಕಪ್ಪ ಕಾಮ್ರಾಜ್ ಅವರ ಮೃತದೇಹಗಳು ಅಣೆಕಟ್ಟೆಯಲ್ಲಿ ತೇಲುತ್ತಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಮ್ರಾಜ್ ಅವರು ಖಮಾರಿಯಾದಲ್ಲಿರುವ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಾರ್ಗಿಯ ಉಪ ವಿಭಾಗ ಪೊಲೀಸ್ ಅಧಿಕಾರಿ ಅನುಜ್ ಅಯಾಂಕ್ ಮಿಶ್ರಾ ಮಾಹಿತಿ ನೀಡಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಸುಮಾರು 20 ವರ್ಷಗಳಷ್ಟು ಹಳೆಯದಾದ ಬೋಟ್ ಗುರುವಾರ ಸಂಜೆ ಬೀಸಿದ ಬಿರುಗಾಳಿಗೆ ಸಿಲುಕಿ ನದಿಯಲ್ಲಿ ಮಗುಚಿಕೊಂಡಿತ್ತು. ರಕ್ಷಣಾ ಕಾರ್ಯಾಚರಣೆಗಾಗಿ ಆಗ್ರಾದಿಂದ ಸುಮಾರು 20 ಮಂದಿ ಸೇನಾ ಮುಳುಗು ತಜ್ಞರನ್ನು ಏರ್ ಲಿಫ್ಟ್ ಮೂಲಕ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹಾಗೂ ಸ್ಥಳೀಯ ಮುಳುಗು ತಜ್ಞರು ಈ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದ 41 ಮಂದಿ ಗುರುತಿಸಲಾಗಿರುವ ಪ್ರಯಾಣಿಕರ ಪೈಕಿ 28 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೆ ಅಧಿಕಾರಿಗಳು 41 ಮಂದಿ ಪ್ರಯಾಣಿಕರ ಗುರುತನ್ನು ಮಾತ್ರ ದೃಢಪಡಿಸಿದ್ದರೂ, ಬೋಟ್ ಹತ್ತುವ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ 43 ಪ್ರಯಾಣಿಕರು ಬೋಟ್‌ನತ್ತ ತೆರಳುತ್ತಿರುವುದು ಸೆರೆಯಾಗಿದೆ. ಇದು ಪ್ರಯಾಣಿಕರ ಸಂಖ್ಯೆಯಲ್ಲಿ ಗೊಂದಲ ಮೂಡಿಸಿದೆ. ಈ ಘಟನೆಯ ಕುರಿತು ಶುಕ್ರವಾರ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ್ದು, ಬೋಟ್‌ನ ಮೂವರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ. ಅಲ್ಲದೆ, ರಾಜ್ಯದಲ್ಲಿ ಇಂತಹ ಬೋಟ್‌ಗಳ ಕಾರ್ಯಾಚರಣೆಯನ್ನು ನಿಷೇಧಿಸಿದೆ.

Edited By : Nagaraj Tulugeri
PublicNext

PublicNext

03/05/2026 04:44 pm

Cinque Terre

96.09 K

Cinque Terre

1

ಸಂಬಂಧಿತ ಸುದ್ದಿ