ಕೌಲಾಲಂಪುರ್: ಇಲ್ಲಿನ ಪ್ರಸಿದ್ಧ 'ರೇನ್ ರೇವ್' ವಾಟರ್ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ (Rain Rave Water Music Festival) 28 ವರ್ಷದ ಮಹಿಳೆಯೊಬ್ಬಳು ಚಾಕು ಹಿಡಿದು ಸಾರ್ವಜನಿಕರ ಮೇಲೆ ದಾಳಿಗೆ ಯತ್ನಿಸಿದ ಘಟನೆ ಭೀತಿಯನ್ನು ಸೃಷ್ಟಿಸಿದೆ. ಸುಮಾರು 30,000 ಜನ ಸೇರಿದ್ದ ಈ ಅದ್ಧೂರಿ ಸಂಗೀತ ಕಾರ್ಯಕ್ರಮವು ಕ್ಷಣಾರ್ಧದಲ್ಲಿ ಆತಂಕದ ತಾಣವಾಗಿ ಮಾರ್ಪಟ್ಟಿತು.
ಕಾರ್ಯಕ್ರಮದ ಕೊನೆಯ ದಿನದಂದು ಬುಕಿತ್ ಬಿಂಟಾಂಗ್ ಎಂಬಲ್ಲಿ ಸಾವಿರಾರು ಜನರು ಸಂಗೀತದ ಗುಂಗಿನಲ್ಲಿದ್ದರು. ಈ ಸಂದರ್ಭದಲ್ಲಿ ಹಠಾತ್ತನೆ ಮಹಿಳೆಯೊಬ್ಬಳು ಚಾಕು ಹೊರತೆಗೆದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಲು ಮುಂದಾಗಿದ್ದಾಳೆ. ಇದನ್ನು ಕಂಡ ನೆರೆದಿದ್ದವರು ದಿಕ್ಕಾಪಾಲಾಗಿ ಓಡಲು ಆರಂಭಿಸಿದರು.
ಈ ಭೀಕರ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್‌ಸ್ಟಾಗ್ರಾಮ್ ಬಳಕೆದಾರ @jxsttin ಎಂಬುವವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಆ ಮಹಿಳೆಯನ್ನು ಕೆಲವರು ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
"ನಾನು ಶಾಂತಿಯುತವಾಗಿ ನನ್ನ ಸ್ನೇಹಿತನನ್ನು ಹುಡುಕುತ್ತಿದ್ದೆ. ಆಗಲೇ ಮಹಿಳೆಯೊಬ್ಬಳು ಚಾಕು ತೆಗೆದು ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಚುಚ್ಚಲು ಮುಂದಾದಳು. ಸುತ್ತಲೂ ಬೇಲಿಗಳಿದ್ದ ಕಾರಣ ನನಗೆ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ. ನಾನು ಅವಳಿಂದ ಕೇವಲ ಒಂದು ಇಂಚು ದೂರದಲ್ಲಿದ್ದೆ," ಎಂದು ಪ್ರತ್ಯಕ್ಷದರ್ಶಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳೆಯು ಚಾಕು ಹಿಡಿದು ಪ್ರತಿರೋಧ ತೋರುತ್ತಿದ್ದರೂ, ಅಲ್ಲಿದ್ದ ಕೆಲವು ಯುವಕರು ಮತ್ತು ಭದ್ರತಾ ಸಿಬ್ಬಂದಿ ಪ್ರಾಣದ ಹಂಗು ತೊರೆದು ಆಕೆಯನ್ನು ಹಿಡಿದು ಕೆಳಕ್ಕೆ ಕೆಡವಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ಸಮಾಧಾನದ ಸಂಗತಿ.
ಕೌಲಾಲಂಪುರ್ ಪೊಲೀಸ್ ಮುಖ್ಯಸ್ಥರಾದ ದತುಕ್ ಫಾದಿಲ್ ಮರ್ಸಸ್ ಅವರು ಮಾತನಾಡಿ, "ಘಟನಾ ಸ್ಥಳದಲ್ಲಿದ್ದ ಪೊಲೀಸರು ಮತ್ತು ಸಾರ್ವಜನಿಕರ ಶೀಘ್ರ ಪ್ರತಿಕ್ರಿಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಮಹಿಳೆಯನ್ನು ಬಂಧಿಸಲಾಗಿದ್ದು, ಮಾರಕಾಸ್ತ್ರ ಹೊಂದಿದ್ದಕ್ಕಾಗಿ ತನಿಖೆ ಎದುರಿಸುತ್ತಿದ್ದಾಳೆ," ಎಂದು ತಿಳಿಸಿದ್ದಾರೆ.
PublicNext
03/05/2026 07:26 pm