ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನಲ್ಲಿ ಅಮಾನವೀಯ ಚಿತ್ರಹಿಂಸೆ, ಮಾನಸಿಕ ಸಂಕಟ : ಸುಪ್ರೀಂನಲ್ಲಿ ದರ್ಶನ ಅಳಲು

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್, ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಜೈಲಿನೊಳಗಿನ ಅಮಾನವೀಯ ಪರಿಸ್ಥಿತಿಗಳು ಹಾಗೂ ತಮ್ಮ ವೃತ್ತಿಜೀವನದ ಸಂಕಷ್ಟಗಳನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಮೇ 4 ರಂದು ನಡೆಯಲಿದ್ದು, ನ್ಯಾಯಾಲಯದ ತೀರ್ಪಿನ ಮೇಲೆ ಎಲ್ಲರ ಗಮನ ನೆಟ್ಟಿದೆ.

ದರ್ಶನ್ ತಮ್ಮ ಅರ್ಜಿಯಲ್ಲಿ, ಜೈಲಿನಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ತಮ್ಮನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಇದು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸಹಕೈದಿಗಳಿಂದ ನಿರಂತರ ಬೆದರಿಕೆ ಹಾಗೂ ನಿಂದನೆಗಳು ಎದುರಾಗುತ್ತಿವೆ ಎಂದು ದೂರಿದ್ದಾರೆ. ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ನಕಾರಾತ್ಮಕ ಪ್ರಚಾರದಿಂದ ಜೈಲಿನೊಳಗಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಉಲ್ಲೇಖಿಸಿದ್ದಾರೆ.

ಇತರ ಕೈದಿಗಳಿಗೆ ಹೋಲಿಸಿದರೆ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ದರ್ಶನ್ ಗಂಭೀರ ಆರೋಪ ಮಾಡಿದ್ದಾರೆ. ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಸಮಯವನ್ನು ಕಡಿತಗೊಳಿಸಲಾಗಿದೆ ಮತ್ತು ಹೊರಗಿನಿಂದ ಆಹಾರ ಹಾಗೂ ಬಟ್ಟೆಗಳನ್ನು ಪಡೆಯಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರೂ, ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿಲ್ಲ ಎಂದೂ ಅರ್ಜಿಯಲ್ಲಿ ತಿಳಿಸಿದ್ದಾರೆ.

ತಮ್ಮ ಜೈಲುವಾಸವು ವೃತ್ತಿಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ದರ್ಶನ್ ಉಲ್ಲೇಖಿಸಿದ್ದಾರೆ. ಹಲವು ಚಿತ್ರಗಳಿಗೆ ಈಗಾಗಲೇ ಸಹಿ ಹಾಕಿದ್ದು, ತಮ್ಮ ಅನುಪಸ್ಥಿತಿಯಿಂದಾಗಿ ನಿರ್ಮಾಪಕರಿಗೆ ಭಾರಿ ಆರ್ಥಿಕ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ 262 ಸಾಕ್ಷಿಗಳ ವಿಚಾರಣೆ ಅಗತ್ಯವಿದ್ದು, ತನಿಖೆಯು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದು, ತಮಗೆ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.

Edited By :
PublicNext

PublicNext

03/05/2026 05:07 pm

Cinque Terre

19 K

Cinque Terre

7