ಭಾರತದ ಫಿಟ್‌ನೆಸ್ ಮಾದರಿ ಮಿಲಿಂದ್ ಸೋಮನ್ ಮತ್ತೊಮ್ಮೆ 'ವಯಸ್ಸು ಕೇವಲ ಒಂದು ಸಂಖ್ಯೆ' ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲಿ ಅತ್ಯಂತ ಅಪಾಯಕಾರಿ 'ಸ್ಟ್ರೈಟ್ ಆಫ್ ಗಿಬ್ರಾಲ್ಟರ್' (Strait of Gibraltar) ಜಲಸಂಧಿಯನ್ನು ಈಜುವ ಮೂಲಕ ಯುರೋಪ್ ಖಂಡದಿಂದ ಆಫ್ರಿಕಾ ಖಂಡವನ್ನು ತಲುಪಿ ಇಡೀ ಜಗತ್ತನ್ನೇ ಬೆರಗುಗೊಳಿಸಿದ್ದಾರೆ.
ಹೌದು ಮೇ 1 ರಂದು ಸ್ಪೇನ್‌ನ ತಾರಿಫಾದಿಂದ (Tarifa) ತಮ್ಮ ಈಜನ್ನು ಪ್ರಾರಂಭಿಸಿದ ಮಿಲಿಂದ್ ಸೋಮನ್, ಸಮುದ್ರದ ನಡುವೆ ಸುಮಾರು 15 ಕಿಲೋಮೀಟರ್ ದೂರವನ್ನು ಈಜುವ ಮೂಲಕ ಮೊರಾಕೊ ಕರಾವಳಿಯನ್ನು ತಲುಪಿದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಜಲಗಡಿಯನ್ನು ಈಜಿ ದಾಟಿದ ಅಪರೂಪದ ಸಾಧನೆಗೆ ಪಾತ್ರರಾಗಿ, ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಗಿಬ್ರಾಲ್ಟರ್ ಜಲಸಂಧಿಯನ್ನು ಈಜಿ ದಾಟುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿನ ನೀರಿನ ಪ್ರವಾಹ ಅತ್ಯಂತ ಪ್ರಬಲವಾಗಿದ್ದು, ಹವಾಮಾನ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಇದಲ್ಲದೆ, ಇದು ವಿಶ್ವದ ಅತ್ಯಂತ ಜನನಿಬಿಡ ಹಡಗು ಸಂಚಾರ ಮಾರ್ಗಗಳಲ್ಲಿ ಒಂದಾಗಿದೆ. ಇಂತಹ ಕಠಿಣ ಸವಾಲುಗಳ ನಡುವೆಯೂ ಮಿಲಿಂದ್ ಸೋಮನ್ ಎದೆಗುಂದದೆ ತಮ್ಮ ಗುರಿಯನ್ನು ತಲುಪಿದ್ದಾರೆ.
ತಮ್ಮ ಈ ಸಾಹಸದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಿಲಿಂದ್, "ಮೇ 1 ರಂದು ನಾನು ಯುರೋಪ್‌ನಿಂದ ಆಫ್ರಿಕಾಕ್ಕೆ 15 ಕಿ.ಮೀ ಈಜಿದೆ. ಇದು ನಿಜಕ್ಕೂ ಅದ್ಭುತ ಅನುಭವ" ಎಂದು ಬರೆದುಕೊಂಡಿದ್ದಾರೆ. ಅವರ ಈ ಅಸಾಮಾನ್ಯ ಸಾಧನೆಗೆ ಬಾಲಿವುಡ್ ತಾರೆಯರು ಮತ್ತು ಅಭಿಮಾನಿಗಳಿಂದ ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ.
ಇತ್ತೀಚೆಗಷ್ಟೇ ಗೋವಾದ ಸಮುದ್ರದಲ್ಲಿ 20 ಕಿ.ಮೀ ಈಜಿ ಗಮನ ಸೆಳೆದಿದ್ದ ಮಿಲಿಂದ್, ಈಗ ತಮ್ಮ ಸತತ ತರಬೇತಿ ಮತ್ತು ಕಟ್ಟುನಿಟ್ಟಿನ ಜೀವನಶೈಲಿಯಿಂದ ಈ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. 60ರ ವಯಸ್ಸಿನಲ್ಲೂ ಅವರ ಈ ಅಚಲ ಶಕ್ತಿ ಮತ್ತು ತಾಳ್ಮೆ ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿಯಾಗಿದೆ.
2015 ರಲ್ಲಿ 'ಐರನ್ ಮ್ಯಾನ್' ಎಂಬ ಕಠಿಣ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸುದ್ದಿಯಾಗಿದ್ದ ಮಿಲಿಂದ್ ಸೋಮನ್, ಇದೀಗ ಖಂಡಾಂತರ ಈಜುಗಾರನಾಗಿ ಹೊರಹೊಮ್ಮಿದ್ದಾರೆ.
PublicNext
06/05/2026 02:14 pm