ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ಫಾಲ್ತಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಭಾರತೀಯ ಜನತಾ ಪಾರ್ಟಿ (BJP) ಭರ್ಜರಿ ಮುನ್ನಡೆ ಸಾಧಿಸಿದೆ. 6ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 19,701 ಮತಗಳ ಬೃಹತ್ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸದ್ಯದ ಟ್ರೆಂಡ್ ಗಮನಿಸಿದರೆ, ಫಾಲ್ತಾದಲ್ಲಿ ಬಿಜೆಪಿ ದೊಡ್ಡ ಅಂತರದ ಗೆಲುವಿನತ್ತ ಹೆಜ್ಜೆ ಇಟ್ಟಿದೆ.
6ನೇ ಸುತ್ತಿನ ಮತಗಳ ವಿವರ
6ನೇ ಸುತ್ತಿನ ಮತ ಎಣಿಕೆ ಮುಗಿದ ನಂತರ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ
* ಬಿಜೆಪಿ (BJP): 37,474 (ಮುನ್ನಡೆ)
* ಸಿಪಿಐಎಂ (CPI-M): 17,773
* ಕಾಂಗ್ರೆಸ್ (Congress): 3,784
* ಟಿಎಂಸಿ (TMC): 1,904
ಟಿಎಂಸಿ 'ಪುಷ್ಪ'ಗೆ ಮುಖಭಂಗ, ಪಕ್ಷಕ್ಕೆ ಆಘಾತ
ಈ ಚುನಾವಣೆಯ ಅತ್ಯಂತ ಅಚ್ಚರಿಯ ಬೆಳವಣಿಗೆ ಎಂದರೆ, ಟಿಎಂಸಿ (TMC) ವಲಯದಲ್ಲಿ "ಪುಷ್ಪ" ಎಂದೇ ಚಿರಪರಿಚಿತರಾಗಿದ್ದ ಜಹಾಂಗೀರ್ ಖಾನ್ ಸದ್ಯ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ ಅವರು ಅಖಾಡದಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದರಾದರೂ, ಇವಿಎಂನಲ್ಲಿ ಅವರ ಹೆಸರಿದ್ದ ಕಾರಣ ಮತಗಳು ಬಿದ್ದಿವೆ. ಈ ಮತಗಳ ಎಣಿಕೆಯಲ್ಲಿ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಿಂತಲೂ ಕಡಿಮೆ ಮತಗಳನ್ನು ಪಡೆದು ಟಿಎಂಸಿ ಅಭ್ಯರ್ಥಿ 4ನೇ ಸ್ಥಾನಕ್ಕೆ ಕುಸಿದಿರುವುದು ಮಮತಾ ಬ್ಯಾನರ್ಜಿ ಪಕ್ಷಕ್ಕೆ ಭಾರಿ ಆಘಾತ ನೀಡಿದೆ.
PublicNext
24/05/2026 11:36 am