ನವದೆಹಲಿ: ಎಬೋಲಾ ವೈರಸ್ ವ್ಯಾಪಕವಾಗಿ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸುಡಾನ್ ಸೇರಿದಂತೆ ಕೆಲವು ದೇಶಗಳಿಗೆ ಅಗತ್ಯವಿಲ್ಲದ ಯಾವುದೇ ಪ್ರಯಾಣ ಕೈಗೊಳ್ಳಬೇಡಿ ಎಂದು ಭಾರತ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಈ ಮೂರು ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸ್ಥಳೀಯ ಆಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸೂಚಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸುಗಳಿಗೆ ಅನುಗುಣವಾಗಿ ಈ ಆರೋಗ್ಯ ಸಲಹೆಯನ್ನು ನೀಡಲಾಗಿದೆ ಎಂದು ಸರ್ಕಾರ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಎಬೋಲಾ ವೈರಸ್ ಸೋಂಕು ಆಫ್ರಿಕಾದ ಕೆಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಕಾರಣ, ಜಗತ್ತಿನ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ WHO ತಾತ್ಕಾಲಿಕ ಶಿಫಾರಸುಗಳನ್ನೂ ಹೊರಡಿಸಿದೆ.
ಮೇ 22ರಂದು ಹೊರಡಿಸಿದ ಹೊಸ ನಿರ್ದೇಶನಗಳ ಪ್ರಕಾರ, ಅಂತಾರಾಷ್ಟ್ರೀಯ ಗಡಿ ತಪಾಸಣಾ ಕೇಂದ್ರಗಳಲ್ಲಿ ರೋಗದ ಮೇಲ್ವಿಚಾರಣೆಯನ್ನು ಹೆಚ್ಚಿಸಬೇಕೆಂದು ಸೂಚಿಸಲಾಗಿದೆ. ಸೋಂಕು ಬೇರೆ ದೇಶಗಳಿಗೆ ಹರಡದಂತೆ ಕಟ್ಟುನಿಟ್ಟಿನ ತಪಾಸಣೆಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
PublicNext
24/05/2026 04:40 pm