ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ವಿಶೇಷವಾಗಿ ಧಾರ್ಮಿಕ ಕ್ಷೇತ್ರಗಳಲ್ಲಿ ನಾಗರಿಕ ಪ್ರಜ್ಞೆ ಮರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಶಿಸ್ತಿನ ವರ್ತನೆ, ನಿಯಮ ಉಲ್ಲಂಘನೆಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ, ಉತ್ತರಾಖಂಡದ ಚಂದ್ರಶಿಲಾ ದೇವಾಲಯದ ಆವರಣದಲ್ಲಿ ಪ್ರವಾಸಿಗರು ಶೂ ಧರಿಸಿ ಕುಳಿತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಂತರ ದೇವಾಲಯದಲ್ಲಿ ಮುಸ್ಲಿಂ ಸಿಬ್ಬಂದಿಯೊಬ್ಬರು ಶೂ ಧರಿಸಿ ಕುಳಿತಿದ್ದ ಘಟನೆ ಹಿಂದೂ ಭಕ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿವಾದದ ಬೆನ್ನಲ್ಲೇ ಈಗ ಉತ್ತರಾಖಂಡದ ಚಂದ್ರಶಿಲಾ ಶಿಖರದ ಮೇಲಿರುವ ಪವಿತ್ರ ದೇವಾಲಯದ ಆವರಣದಲ್ಲಿ ಇಬ್ಬರು ಪ್ರವಾಸಿಗರು ಶೂ ಧರಿಸಿ ನಿರಾಳವಾಗಿ ಕುಳಿತಿರುವ ದೃಶ್ಯ ಕಂಡುಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿಯಲು ಮುಂದಾಗಿದ್ದಾನೆ. ಮೊದಲಿಗೆ ವಿಡಿಯೋಗೆ ಕೈ ಬೀಸಿ ನಕ್ಕ ಪ್ರವಾಸಿಗರು, ಯುವಕ ಶೂ ಧರಿಸಿರುವುದನ್ನು ತೋರಿಸಿದಾಗ ಪರಿಸ್ಥಿತಿ ಬದಲಾಗಿದೆ.
ತಮ್ಮನ್ನು ವಿಡಿಯೋ ಮಾಡುತ್ತಿರುವುದನ್ನು ನೋಡಿದ ಪ್ರವಾಸಿಗರು ತಕ್ಷಣವೇ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನೀವು ಹಣ ಗಳಿಸಲು ಏನು ಬೇಕಾದರೂ ಮಾಡುತ್ತೀರಾ? ವಿಡಿಯೋ ಮಾಡುವ ಬದಲು ನೇರವಾಗಿ ವಿಷಯ ತಿಳಿಸಬಹುದಿತ್ತಲ್ಲವೇ?" ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯುವಕ, "ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ಇಲ್ಲಿ ಶೂ ಧರಿಸುವ ಹಾಗಿಲ್ಲ. ನನ್ನ ಮಾತನ್ನು ಕೇಳದಿದ್ದರೆ ಅದು ನಿಮ್ಮ ಸಮಸ್ಯೆ" ಎಂದು ಖಡಾಖಂಡಿತವಾಗಿ ಉತ್ತರಿಸಿದ್ದಾನೆ.
ಪ್ರವಾಸಿ ಮಹಿಳೆಯೊಬ್ಬರು "ದುಡ್ಡು ಸಂಪಾದಿಸು, ವೀವ್ಸ್ ಗಳಿಸು" ಎಂದು ವ್ಯಂಗ್ಯವಾಡಿದಾಗ, ಯುವಕ "ನಿಮ್ಮನ್ನು ತೋರಿಸಿದರೆ ನನಗೆ ವೀವ್ಸ್ ಬರುವುದಿಲ್ಲ, ಹಣವೂ ಬರುವುದಿಲ್ಲ" ಎಂದು ತಿರುಗೇಟು ನೀಡಿದ್ದಾನೆ. ವಿಡಿಯೋ ಡಿಲೀಟ್ ಮಾಡುವಂತೆ ಪ್ರವಾಸಿಗರು ಪದೇ ಪದೇ ಕೇಳಿಕೊಂಡರೂ ಯುವಕ ಅದಕ್ಕೆ ನಿರಾಕರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ 24 ಗಂಟೆಗಳಲ್ಲಿ 2.18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಬ್ಬ ನೆಟ್ಟಿಗರು, "ಇಂತಹ ಜನ ಕೇವಲ ಮೋಜು ಮಾಡಲು ಬರುತ್ತಾರೆ, ಗೌರವದಿಂದ ಅಲ್ಲ. ಇಂತಹವರನ್ನು ಅಲ್ಲಿಂದ ಓಡಿಸಬೇಕು" ಎಂದು ಬರೆದಿದ್ದರೆ, ಮತ್ತೊಬ್ಬರು "ಅಲ್ಲಿ ಹಿಮ ಆವರಿಸಿದೆ. ವಿಡಿಯೋ ಮಾಡಿದ್ದು ತಪ್ಪು" ಎಂದು ಪ್ರವಾಸಿಗರನ್ನು ಸಮರ್ಥಿಸಿಕೊಂಡಿದ್ದಾರೆ. ಈ ಘಟನೆ ಧಾರ್ಮಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಶಿಷ್ಟಾಚಾರದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸ ಒದಗಿಸಿದೆ.
PublicNext
28/05/2026 05:38 pm