ತಿರುವನಂತಪುರಂ: ಪ್ರವಾಸಿಗರು ಹರ್ಷ ಉಲ್ಲಾಸದಿಂದ ಆಟವಾಡುತ್ತಿದ್ದ ಜಾಗದಲ್ಲೇ ಕ್ಷಣಾರ್ಧದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೇರಳದ ರಾಜಧಾನಿ ತಿರುವನಂತಪುರಂ ಸಮೀಪದ ವೆಂಜಾರಮೂಡು ಎಂಬಲ್ಲಿರುವ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಗುರುವಾರ ಭೀಕರ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರೈಡ್ (ಜೂಕಾಲಿ ಮಾದರಿಯ ಆಟದ ಯಂತ್ರ) ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಮುರಿದು ಬಿದ್ದಿದ್ದು, ಕನಿಷ್ಠ ಐದು ಜನ ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ (PTI) ವರದಿ ಮಾಡಿರುವ ಪ್ರಕಾರ, ಜನರು ರೈಡ್‌ನಲ್ಲಿ ಕುಳಿತು ಆಟದ ಮಜಾ ಸವಿಯುತ್ತಿದ್ದಾಗಲೇ ಈ ತಾಂತ್ರಿಕ ದೋಷ ಸಂಭವಿಸಿದೆ. ರೈಡ್ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಅದರಲ್ಲಿದ್ದವರು ಜೋರಾಗಿ ಕಿರುಚಾಡಿದ್ದಾರೆ. ಈ ಇಡೀ ಭೀಕರ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಅಲ್ಲಿದ್ದ ಪ್ರವಾಸಿಗರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣವೇ ಎಚ್ಚೆತ್ತ ಪಾರ್ಕ್ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಯಾರಿಗೂ ಪ್ರಾಣಾಪಾಯವಿಲ್ಲ ಮತ್ತು ಎಲ್ಲರ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹಾಗೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿನ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಈ ಘಟನೆ ಮತ್ತೆ ಆತಂಕ ಮೂಡಿಸಿದೆ. ವೆಂಜಾರಮೂಡು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣವೇನು? ರೈಡ್‌ಗಳ ಸುರಕ್ಷತಾ ತಪಾಸಣೆ ಸರಿಯಾಗಿ ನಡೆದಿತ್ತೇ ಇಲ್ಲವೇ? ಎಂಬ ಬಗ್ಗೆ ಸಮಗ್ರ ತನಿಖೆಯನ್ನು ಆರಂಭಿಸಿದ್ದಾರೆ.
PublicNext
28/05/2026 06:12 pm