ಹೊಸದೆಹಲಿ: ಗುಜರಾತ್‌ನಲ್ಲಿರುವ ಆಮ್ ಆದ್ಮಿ ಪಾರ್ಟಿ (AAP) ಕಾರ್ಯಕರ್ತರಿಗೆ ಗುಪ್ತಚರ ಇಲಾಖೆ (Intelligence Bureau - IB) ಅಧಿಕಾರಿಗಳ ಹೆಸರಿನಲ್ಲಿ ನಿರಂತರವಾಗಿ ಕರೆಗಳು ಬರುತ್ತಿದ್ದು, "ವೆರಿಫಿಕೇಶನ್" (ಪರಿಶೀಲನೆ) ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಆಪ್ ನಾಯಕ ದುರ್ಗೇಶ್ ಪಾಠಕ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ದೇಶದ ಯಾವ ಕಾನೂನಿನ ಅಡಿಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಐಬಿ ಅಧಿಕಾರಿಗಳು ವಿಚಾರಣೆಗೆ ಕರೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಆಪ್ ನಾಯಕ ದುರ್ಗೇಶ್ ಪಾಠಕ್ ತಮ್ಮ ಪೋಸ್ಟ್‌ನಲ್ಲಿ, "ಗುಜರಾತ್‌ನಲ್ಲಿ ಪಕ್ಷದ ಕೆಲಸ ನಿರತರಾಗಿದ್ದ ನಮ್ಮ ಕಾರ್ಯಕರ್ತರೊಬ್ಬರಿಗೆ `9512892492` ಎಂಬ ನಂಬರ್‌ನಿಂದ ನಿರಂತರವಾಗಿ ಕರೆಗಳು ಬರುತ್ತಿವೆ. ಕರೆ ಮಾಡಿದ ವ್ಯಕ್ತಿ ತಾನು ಐಬಿ ಅಧಿಕಾರಿ ಎಂದು ಪರಿಚಯಿಸಿಕೊಂಡು, ಪರಿಶೀಲನೆಗಾಗಿ ಕಚೇರಿಗೆ ಬರುವಂತೆ ಸೂಚಿಸುತ್ತಿದ್ದಾನೆ. ಇದು ನಿಜವಾಗಿಯೂ ಐಬಿ ನಂಬರ್ ಹೌದೇ? ಹೌದಾಗಿದ್ದರೆ, ಕೆಲಸದ ನಿಮಿತ್ತ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವ ವ್ಯಕ್ತಿ ಐಬಿ ಬಳಿ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ಯಾವ ಕಾನೂನಲ್ಲಿದೆ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದರು.
ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅರವಿಂದ್ ಕೇಜ್ರಿವಾಲ್, ಆ ನಂಬರ್‌ಗೆ ತಾವೇ ಖುದ್ದಾಗಿ ಫೋನ್ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, "ನಾನು ಆ ನಂಬರ್‌ಗೆ ಕರೆ ಮಾಡಿ ನೀನು ಐಬಿಯಿಂದ ಮಾತನಾಡುತ್ತಿರುವುದಾ? ಎಂದು ಕೇಳಿದೆ. ಆತ ಹೌದು ಎಂದನು. ತಕ್ಷಣ ನಾನು 'ನಾನು ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಿದ್ದೇನೆ. ಯಾವ ಕಾನೂನಿನ ಅಡಿಯಲ್ಲಿ ನೀವು ಕಾರ್ಯಕರ್ತರ ವೆರಿಫಿಕೇಶನ್ ನಡೆಸುತ್ತಿದ್ದೀರಿ?' ಎಂದು ಪ್ರಶ್ನಿಸಿದೆ. ಅಷ್ಟೇ, ಆ ವ್ಯಕ್ತಿ ತಕ್ಷಣ ಫೋನ್ ಕಟ್ ಮಾಡಿದ. ಆ ಬಳಿಕ ನಾನು ಎಷ್ಟೇ ಕರೆ ಮಾಡಿದರೂ ಅವರು ಫೋನ್ ರಿಸೀವ್ ಮಾಡುತ್ತಿಲ್ಲ," ಎಂದು ಬರೆದುಕೊಂಡಿದ್ದಾರೆ.
"ಯಾವ ಕಾನೂನಿನ ಅಡಿಯಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಐಬಿ ಅಧಿಕಾರಿಗಳು ವಿಚಾರಣೆಗೆ ಕರೆಯುತ್ತಿದ್ದಾರೆ?" - ಅರವಿಂದ್ ಕೇಜ್ರಿವಾಲ್
ಈ ವಿವಾದಾತ್ಮಕ ಫೋನ್ ನಂಬರ್ ನಿಜವಾಗಿಯೂ ತನಗೇ ಸೇರಿದ್ದೇ ಎಂಬುದನ್ನು ಗುಪ್ತಚರ ಇಲಾಖೆ (IB) ಅಧಿಕೃತವಾಗಿ ಸ್ಪಷ್ಟಪಡಿಸಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ. ಈಗಾಗಲೇ ಹಲವು ಆಪ್ ಕಾರ್ಯಕರ್ತರಿಗೆ ಇಂತಹ ಕರೆಗಳು ಬಂದಿವೆ ಎಂದು ಆರೋಪಿಸಿರುವ ಅವರು, "ಮುಂದಿನ ಬಾರಿ ನಾನು ಗುಜರಾತ್‌ಗೆ ಭೇಟಿ ನೀಡಿದಾಗ, ಖುದ್ದಾಗಿ ಐಬಿ ಕಚೇರಿಗೆ ತೆರಳಿ ಈ ಬಗ್ಗೆ ಸ್ಪಷ್ಟನೆ ಕೇಳಲಿದ್ದೇನೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಗುಜರಾತ್‌ನಲ್ಲಿರುವ ಆಪ್ ಕಾರ್ಯಕರ್ತರಿಗೆ ಇಂತಹ ಯಾವುದೇ ಕರೆಗಳು ಬಂದರೆ ತಕ್ಷಣ ಆ ನಂಬರ್ ಹಾಗೂ ವಿವರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ.
PublicNext
28/05/2026 06:19 pm