ನವದೆಹಲಿ: ದೇಶಾದ್ಯಂತ ಲಕ್ಷಾಂತರ ಶಿಕ್ಷಕರ ಭವಿಷ್ಯದ ಮೇಲೆ ಪರಿಣಾಮ ಬೀರುವ ಮಹತ್ವದ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ನೀಡಿದೆ. ಶಿಕ್ಷಕರ ಸೇವೆ ಮುಂದುವರಿಕೆ ಹಾಗೂ ಬಡ್ತಿಗೆ ಟಿಇಟಿ ಪರೀಕ್ಷೆ ಕಡ್ಡಾಯ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಈಗಾಗಲೇ ಸೇವೆಯಲ್ಲಿರುವ ಶಿಕ್ಷಕರಲ್ಲೂ ಆತಂಕ ಹೆಚ್ಚಿಸಿದೆ.
ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ ರವಾನಿಸಿದೆ. ಶಿಕ್ಷಕರ ಅರ್ಹತಾ ಪರೀಕ್ಷೆ, ಅಂದರೆ ಟಿಇಟಿ ಪಾಸ್ ಮಾಡದೆ ಇನ್ನು ಮುಂದೆ ಶಿಕ್ಷಕರಾಗಿ ಸೇವೆ ಮುಂದುವರಿಸುವುದು ಮತ್ತು ಬಡ್ತಿ ಪಡೆಯುವುದು ಸುಲಭವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ದೇಶಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಮೇಲೆ ಈ ತೀರ್ಪಿನ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ. ಈಗಾಗಲೇ ಸೇವೆಯಲ್ಲಿರುವ ಟಿಇಟಿ ಅರ್ಹತೆ ಇಲ್ಲದ ಶಿಕ್ಷಕರಿಗೆ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆಯಾದರೂ, 2028ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಉದ್ಯೋಗದ ಭದ್ರತೆ ಪ್ರಶ್ನಾರ್ಹವಾಗಬಹುದು.
ಈ ತೀರ್ಪು ಶಿಕ್ಷಕರಲ್ಲಿ ಆತಂಕ ಸೃಷ್ಟಿಸಿದ್ದು, ಹಿರಿಯ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಅಗತ್ಯವಿದ್ದರೆ ಸುಗ್ರೀವಾಜ್ಞೆ ಜಾರಿಗೆ ತಂದು ಶಿಕ್ಷಕರ ಹಿತ ಕಾಪಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಇದೇ ವೇಳೆ ಶಿಕ್ಷಕರಿಗೆ ಮತ್ತೊಂದು ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್, ಪ್ರತಿ ವರ್ಷ ಕನಿಷ್ಠ ಎರಡು ಬಾರಿ ಟಿಇಟಿ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಹೀಗಾಗಿ ಅರ್ಹತೆ ಪಡೆದು ಉದ್ಯೋಗ ಉಳಿಸಿಕೊಳ್ಳುವ ಅವಕಾಶ ಶಿಕ್ಷಕರ ಮುಂದಿದೆ.
PublicNext
31/05/2026 03:09 pm