ನೋಯ್ಡಾ: ತಾವು ಮಾಡಿಸಿದ್ದ ಪೂಜೆಯಿಂದ ಇಷ್ಟಾರ್ಥ ಈಡೇರಲಿಲ್ಲ ಎಂದು ಆಕ್ರೋಶಗೊಂಡ ಇಬ್ಬರು ವ್ಯಕ್ತಿಗಳು ಪೂಜಾರಿಯೊಬ್ಬರನ್ನು ಅಪಹರಿಸಿ, ₹1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ಸರ್ಫಾಬಾದ್ ನಿವಾಸಿ 50 ವರ್ಷದ ಅರ್ಚಕ ಅನಿಲ್ ತಿವಾರಿ ಅವರನ್ನು ಜೌನ್‌ಪುರದ ಮಸಿದಾ ಗ್ರಾಮದ ಆಶಿಶ್ ಯಾದವ್ ಮತ್ತು ಪ್ರವೇಶ್ ಯಾದವ್ ಎಂಬವರು ಅಪಹರಿಸಿದ್ದರು. ಆರೋಪಿಗಳು ಈ ಹಿಂದೆ ಅನಿಲ್ ತಿವಾರಿ ಅವರಿಂದ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಮಾಡಿಸಿದ್ದರು. ಆದರೆ, ಪೂಜೆ ನೆರವೇರಿಸಿದರೂ ತಮ್ಮ ಇಷ್ಟಾರ್ಥ ಈಡೇರದ ಹಿನ್ನೆಲೆಯಲ್ಲಿ ಅರ್ಚಕನೇ ತಮಗೆ ವಂಚಿಸಿದ್ದಾನೆ ಎಂದು ಆರೋಪಿಗಳು ಭಾವಿಸಿದ್ದರು.
ಮತ್ತೊಂದು ಪೂಜೆ ನೆರವೇರಿಸಬೇಕೆಂದು ನಂಬಿಸಿ ಸೆಪ್ಟೆಂಬರ್ 5ರಂದು ಅನಿಲ್ ತಿವಾರಿ ಅವರನ್ನು ಜೌನ್‌ಪುರಕ್ಕೆ ಕರೆಸಿಕೊಂಡ ಆರೋಪಿಗಳು, ಅಲ್ಲಿಗೆ ತೆರಳುತ್ತಿದ್ದಂತೆಯೇ ಅವರನ್ನು ರಹಸ್ಯ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಬಳಿಕ ದೈಹಿಕ ಹಿಂಸೆ ನೀಡಿ, ಈ ಹಿಂದೆ ಪೂಜೆಗೆ ಖರ್ಚು ಮಾಡಿದ್ದ ₹1 ಲಕ್ಷ ಹಣವನ್ನು ವಾಪಸ್ ನೀಡಬೇಕು. ಇಲ್ಲವಾದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಅರ್ಚಕರು ಮನೆಗೆ ಮರಳದ ಹಿನ್ನೆಲೆಯಲ್ಲಿ ಹಾಗೂ ಅಪಹರಣಕಾರರಿಂದ ₹1 ಲಕ್ಷಕ್ಕೆ ಕರೆ ಬಂದಿದ್ದರಿಂದ ಅವರ ಪುತ್ರ ರೋಹಿತ್ ತಿವಾರಿ ಸೆಪ್ಟೆಂಬರ್ 9ರಂದು ನೋಯ್ಡಾದ ಸೆಕ್ಟರ್ 113 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಂತ್ರಿಕ ನೆರವು ಹಾಗೂ ಎಲೆಕ್ಟ್ರಾನಿಕ್ ಕಣ್ಗಾವಲಿನ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಹಣ ಪಡೆಯಲು ಸರ್ಫಾಬಾದ್ ಗ್ರಾಮದ ಬಳಿ ಬಂದ ಆರೋಪಿಗಳನ್ನು ಬಂಧಿಸಿ, ಅನಿಲ್ ತಿವಾರಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆರೋಪಿಗಳಿಂದ ದೇಸಿ ಪಿಸ್ತೂಲ್ ಹಾಗೂ ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
PublicNext
20/09/2026 06:06 pm