ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತಾರಾಷ್ಟ್ರೀಯ ಸಂಶೋಧನಾ ಜರ್ನಲ್ ‘ಡೇಟಾ ಇನ್ ಬ್ರೀಫ್’ನಲ್ಲಿ ಸಿದ್ದಾಪುರದ ಶ್ರೀಗಣೇಶ ಭಟ್ ಸಂಶೋಧನಾ ಲೇಖನ ಪ್ರಕಟ

​ಸಿದ್ದಾಪುರ: ತಾಲೂಕಿನ ಮುತ್ತಿಗೆಯ (ಗೋಳಗೋಡ) ಯುವ ಸಂಶೋಧಕ ಗಣೇಶ ದೇವರು ಭಟ್ ಅವರ ಸಂಶೋಧನಾ ಪ್ರಬಂಧ ಹಾಗೂ ದತ್ತಾಂಶವು ನೆದರ್‌ಲ್ಯಾಂಡ್ಸ್ ಮೂಲದ ಖ್ಯಾತ ಎಲ್ಸೆವಿಯರ್ ಪ್ರಕಾಶನದ ಪ್ರತಿಷ್ಠಿತ ‘ಡೇಟಾ ಇನ್ ಬ್ರೀಫ್’ ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಗೊಂಡಿದೆ. ಇವರು ಮುತ್ತಿಗೆಯ ದೇವರು ಗಣೇಶ ಭಟ್ ಮತ್ತು ಗಂಗಾ ದಂಪತಿಯ ಪುತ್ರ.

​ಪ್ರಸ್ತುತ ಮೈಸೂರಿನಲ್ಲಿರುವ ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನ ಸಂಸ್ಥೆಯಾದ ‘ಭಾರತೀಯ ಭಾಷಾ ಸಂಸ್ಥಾನ’ದ ರಾಷ್ಟ್ರೀಯ ಪರೀಕ್ಷಣಾ ಸೇವೆ ವಿಭಾಗದಲ್ಲಿ ಸಂಸ್ಕೃತ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಗಣೇಶ ಭಟ್, ಕೊಯಮತ್ತೂರಿನ ಅಮೃತ ವಿಶ್ವ ವಿದ್ಯಾಪೀಠಂನಲ್ಲಿ ಕೈಗೊಂಡಿರುವ ಪಿಎಚ್.ಡಿ. ಸಂಶೋಧನೆಯ ಅಂಗವಾಗಿ ಈ ಮೌಲಿಕ ದತ್ತಾಂಶವನ್ನು ರೂಪಿಸಿದ್ದಾರೆ.

​ಗಣಕ ಆಧಾರಿತ ಸಂಸ್ಕೃತ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಚೀನ ಆಯುರ್ವೇದ ಕೃತಿ ಚರಕ ಸಂಹಿತೆಯ ಸಮಾಸ ಪದಗಳನ್ನು ಆಧರಿಸಿ ಸಿದ್ಧಪಡಿಸಲಾದ "CarakaBinary: A Binary-Labelled Dataset from Early Āyurvedic Texts for the Identification of Compound Words in Classical Sanskrit" ಎಂಬ ಇವರ ಲೇಖನ ಮತ್ತು ದತ್ತಾಂಶವು ಕೃತಕ ಬುದ್ಧಿಮತ್ತೆ ಹಾಗೂ ನೈಸರ್ಗಿಕ ಭಾಷಾ ಸಂಸ್ಕರಣಾ ತಂತ್ರಜ್ಞಾನಕ್ಕೆ ಅತ್ಯಂತ ಉಪಯುಕ್ತ ಆಕರವಾಗಿದೆ.

​ಜಾಗತಿಕ ಶೈಕ್ಷಣಿಕ ಮೌಲ್ಯಾಂಕನ ಸಂಸ್ಥೆಗಳಾದ ಸ್ಕೋಪಸ್ ಮತ್ತು ವೆಬ್ ಆಫ್ ಸೈನ್ಸ್ ಸೂಚ್ಯಂಕಗಳಲ್ಲಿ ಮಾನ್ಯತೆ ಹೊಂದಿರುವ ಅತ್ಯುನ್ನತ ಪೀರ್-ರಿವ್ಯೂವ್ಡ್ ಜರ್ನಲ್‌ನಲ್ಲಿ ಗ್ರಾಮೀಣ ಭಾಗದ ಯುವ ವಿದ್ವಾಂಸರೊಬ್ಬರು ಪ್ರಾಚೀನ ಜ್ಞಾನ ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬೆಸೆದು ಜಾಗತಿಕ ಮನ್ನಣೆ ಗಳಿಸಿದೆ.

Edited By : PublicNext Desk
Kshetra Samachara

Kshetra Samachara

30/09/2026 10:22 pm

Cinque Terre

9.98 K

Cinque Terre

0