ಬಳ್ಳಾರಿ: ಬಡ ಆಟೋ ಚಾಲಕರ ಹೊಟ್ಟೆ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ ಚಲಾಯಿಸಿದ್ದಾರೆಯೇ? ಎಂಬ ಆಕ್ರೋಶ ಬಳ್ಳಾರಿಯಲ್ಲಿ ಭುಗಿಲೆದ್ದಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಆಟೋ ಚಾಲಕರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ರಾತ್ರಿ ಸುಮಾರು 11 ಗಂಟೆಗೆ ಆಯುಕ್ತರು, ಇಂಜಿನಿಯರ್‌ಗಳು ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ದೊಡ್ಡ ತಂಡವೇ ಆಗಮಿಸಿ ಬುಲ್ಡೋಜರ್ ಮೂಲಕ ಆಟೋ ನಿಲ್ದಾಣಗಳನ್ನು ತೆರವುಗೊಳಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
2001ರಲ್ಲೇ ಜಿಲ್ಲಾಡಳಿತದಿಂದ ಅನುಮತಿ ಪತ್ರ ಪಡೆದಿದ್ದರೂ ಈ ಏಕಾಏಕಿ ಕಾರ್ಯಾಚರಣೆ ಏಕೆ? ಅನುಮತಿ ಪತ್ರಕ್ಕೆ ಬೆಲೆ ಇಲ್ಲವೇ? ತೆರವುಗೊಳಿಸುವ ಮುನ್ನ ನೋಟಿಸ್ ನೀಡುವ ಸೌಜನ್ಯವೂ ಅಧಿಕಾರಿಗಳಿಗೆ ಇರಲಿಲ್ಲವೇ?
ಇನ್ನು, ನಿಲ್ದಾಣದಲ್ಲಿದ್ದ ಅಂಬೇಡ್ಕರ್ ಅವರ ಭಾವಚಿತ್ರವನ್ನೂ ತೆರವುಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಶ್ನಿಸಿದ ಚಾಲಕರಿಗೆ ಪೊಲೀಸರಿಂದ ಬೆದರಿಕೆ ಹಾಕಲಾಗಿದೆ ಎಂಬುದು ಸಂಘಟನೆಯ ದೂರಾಗಿದೆ.
ನಗರದ ಅಭಿವೃದ್ಧಿ ಎಂದರೆ ಬಡವರ ಬದುಕನ್ನು ಬೀದಿಗೆ ತಳ್ಳುವುದೇ? ದುಡಿದು ಬದುಕುವ ಆಟೋ ಚಾಲಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿಲ್ದಾಣಗಳನ್ನು ತೆರವುಗೊಳಿಸಿದ್ದು ಯಾವ ನ್ಯಾಯ?
ಆಟೋ ಚಾಲಕರ ಸಂಘಟನೆಯ ಜಿಲ್ಲಾಧ್ಯಕ್ಷ ಹುಂಡೇಕರ್ ರಾಜೇಶ್ ಅವರು ಪಾಲಿಕೆ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತೆರವು ಕಾರ್ಯಾಚರಣೆಗೆ ಸ್ಪಷ್ಟನೆ ನೀಡಿ, ಚಾಲಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಬಡವರ ಮೇಲೆ ಅಧಿಕಾರದ ದರ್ಪ ತೋರಿಸುವುದೇ ಆಡಳಿತದ ಕೆಲಸವೇ? ಮಹಾನಗರ ಪಾಲಿಕೆ ಆಯುಕ್ತರು ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ.
ವರದಿ: ಹೊನ್ನುರಸ್ವಾಮಿ ಕೆ. ಟಿ., ಪಬ್ಲಿಕ್ ನೆಕ್ಸ್ಟ್, ಬಳ್ಳಾರಿ
PublicNext
01/11/2026 08:28 pm
LOADING...