ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗ ಅಂದ್ರೆ ಕಾಫಿನಾಡು. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಮುಳ್ಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಗಾಳಿಕೆರೆ ಸೇರಿದಂತೆ ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಂದ ಜಿಲ್ಲಾಡಳಿತ ಹಣ ಸಂಗ್ರಹಿಸುತ್ತಿದ್ದರೂ, ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ದ ಕಾರ್ಯಕರ್ತರು ಕೈಮರ ಚೆಕ್‌ಪೋಸ್ಟ್ ಮುಂದೆಯೇ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಸುಸಜ್ಜಿತ ರಸ್ತೆ ಅಥವಾ ಬಟ್ಟೆ ಬದಲಾಯಿಸುವ ಕೊಠಡಿಗಳಂತಹ ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲ. ಪ್ರತಿನಿತ್ಯ ಪ್ರವಾಸಿಗರಿಂದ ಲಕ್ಷಾಂತರ ರೂಪಾಯಿ ಸಂಗ್ರಹಣೆ ಮಾಡುತ್ತಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ, ಹಾಗೂ ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಕಳೆದ ಆರು ತಿಂಗಳಿಂದ ಅರೆಬೆತ್ತಲೆ ಪ್ರತಿಭಟನೆ, ಸಾಂಕೇತಿಕ ಹೋರಾಟಗಳ ಮೂಲಕ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ; ಆದ್ದರಿಂದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವವರೆಗೆ ಪ್ರವಾಸಿಗರಿಂದ ಸುಂಕ ಅಥವಾ ಹಣ ಸಂಗ್ರಹ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಎಚ್ಚರಿಕೆ ನೀಡಿದರು.
PublicNext
03/11/2026 08:58 pm
LOADING...