ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ : ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ರಾಜುಗೌಡ ನೇತೃತ್ವದಲ್ಲಿ ಬೃಹತ್ ಹೋರಾಟಕ್ಕೆ ಸಿದ್ಧತೆ.

ಯಾದಗಿರಿ : ನಾರಾಯಣಪುರ ಬಸವಸಾಗರ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ರೈತರ ಬೆಳೆಗಳಿಗೆ ಸಮರ್ಪಕ ನೀರು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ನವೆಂಬರ್ 6ರಂದು ಯಾದಗಿರಿ ಜಿಲ್ಲಾ ಬಂದ್‌ಗೆ ಬಿಜೆಪಿ ಕರೆ ನೀಡಿದೆ.

ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ )ಅವರ ನೇತೃತ್ವದಲ್ಲಿ ನಡೆಯಲಿರುವ ಈ ಬಂದ್ ಹೋರಾಟಕ್ಕೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ರೈತರ ಹಿತದೃಷ್ಟಿಯಿಂದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ಡಿಸೆಂಬರ್ 30ರವರೆಗೆ ನಿರಂತರವಾಗಿ ನೀರು ಹರಿಸಬೇಕು. ಅದರಲ್ಲೂ ಕೊನೆಯ ಭಾಗದ ಕಾಲುವೆಗಳಿಗೆ ಡಿಸೆಂಬರ್ ಕೊನೆಯವರೆಗೆ ಅಥವಾ ಜನವರಿ ಮೊದಲ ವಾರದವರೆಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೀರು ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಬಿಜೆಪಿ ನಾಯಕರ ಆರೋಪವಾಗಿದೆ. ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬೆಳೆ ಬೆಳೆಯಲು ಹನಿ ನೀರು ನೀಡಲಾಗದ ಸರ್ಕಾರ ಅಧಿಕಾರದಲ್ಲಿರಲು ಯೋಗ್ಯವಲ್ಲ ಎಂದು ಬಿಜೆಪಿ ಮುಖಂಡ ಕರಣ ಸುಬೇದಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಯಾದಗಿರಿ ಬಂದ್‌ಗೆ ಶಹಾಪುರ ತಾಲೂಕಿನಾದ್ಯಂತ ಸಂಪೂರ್ಣ ಬೆಂಬಲ ಘೋಷಿಸಲಾಗಿದ್ದು, ರೈತರ ನೀರಿನ ಹಕ್ಕಿಗಾಗಿ ರೈತರು, ಯುವಕರು ಹಾಗೂ ಸಾರ್ವಜನಿಕರು ಹೋರಾಟದಲ್ಲಿ ಭಾಗವಹಿಸುವಂತೆ ಬಿಜೆಪಿ ಮುಖಂಡರು ಮನವಿ ಮಾಡಿದ್ದಾರೆ.

ರೈತರ ಬದುಕಿನ ಜೊತೆ ಚೆಲ್ಲಾಟವಾಡಿದರೆ ಸರ್ಕಾರದ ಬುಡವೇ ಅಲುಗಾಡಲಿದೆ ಎಂಬ ಎಚ್ಚರಿಕೆಯನ್ನೂ ಬಿಜೆಪಿ ಮುಖಂಡರು ನೀಡಿದ್ದಾರೆ. ಒಟ್ಟಿನಲ್ಲಿ ನಾರಾಯಣಪುರ ಕಾಲುವೆ ನೀರಿನ ವಿಚಾರವಾಗಿ ಯಾದಗಿರಿಯಲ್ಲಿ ರಾಜಕೀಯ ಸಂಘರ್ಷ ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

Edited By :
PublicNext

PublicNext

05/11/2026 02:30 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ