ಬೆಂಗಳೂರು : ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಹಣಕಾಸು ಇಲಾಖೆಯ ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ನಿರ್ದೇಶನದ ಮೇಲೆಯೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿಟಿ ರವಿ ಆರೋಪಿಸಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿಗಳು ಹೇಳಿದ ರೀತಿಯಲ್ಲಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಇದೆ.
ಆದರೆ ಇಲ್ಲಿ ಕೋತಿ ಯಾರು ಎಂದು ಪ್ರಶ್ನಿಸಿದರು. ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಕೇಂದ್ರವನ್ನು ಏಕೆ ದೂರುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಇಲ್ಲಿ ಕೋತಿ ಕೆಲಸವನ್ನು ಮಾಡಿರುವುದು ನೀವು ಕೇಂದ್ರದ ಮೇಲೆ ತಪ್ಪು ಬರುವ ರೀತಿಯಲ್ಲಿ ನಿಮ್ಮ ಹೇಳಿಕೆಗಳು ತಪ್ಪು ಸಂದೇಶ ಕೊಡುತ್ತಿವೆ, ಅಲ್ಲಿಗೆ ಕೋತಿ ಕೆಲಸ ಮಾಡಿರುವುದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಎಂದು ಬಹಳ ಸ್ಪಷ್ಟವಾಗಿದೆ.
ಅದರಲ್ಲಿಯೂ 2020 ರಿಂದ ನೋಟಿಸ್ ನೀಡಿದ್ದಾರೆ. ನೀವು 2020 ರಿಂದ ನೋಟಿಸ್ ಕೊಡುವ ಕೆಲಸ ಮಾಡಿದ್ದೀರಿ. ಹಾಲು, ಹಣ್ಣು, ತರಕಾರಿ, ಮೊಟ್ಟೆ, ಮಾಂಸ, ಮೀನು, ಅಕ್ಕಿ, ರಾಗಿ, ಜೋಳ, ಗೋಧಿ, ಸಜ್ಜೆ, ನವಣೆ ಇತ್ಯಾದಿ ವ್ಯಾಪಾರ ಮಾಡುವವರಿಗೆ ತೆರಿಗೆ ವಿನಾಯಿತಿ ಇದೆ.
ಆದರೆ ಕಾಂಗ್ರೆಸ್ ಸರ್ಕಾರ ಅವರಿಗೂ ನೋಟಿಸ್ ಕೊಟ್ಟಿದೆ ಎಂದು ದೂರಿದರು. ಇಡೀ ದೇಶದಲ್ಲಿ ಸಣ್ಣ ವ್ಯಾಪಾರಸ್ಥರಿಗೆ ನೋಟಿಸ್ ಹೋಗಿಲ್ಲ. ಕರ್ನಾಟಕದಲ್ಲಿ ಮಾತ್ರ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಹೋಗಿದೆ. ಕೇರಳ, ಮಹಾರಾಷ್ಟ್ರ ಸೇರಿ ಎಲ್ಲಾ ಕಡೆ ನೋಟಿಸ್ ನೀಡಿದ್ದರೆ ಕೇಂದ್ರ ತೆಗೆದುಕೊಂಡಿರುವ ತೀರ್ಮಾನವೆಂದು ನೀವು ಆರೋಪ ಮಾಡಿದರೆ ಅದನ್ನು ಒಪ್ಪಬಹುದಾಗಿತ್ತು, ಆದ್ರೆ ಮಹಾರಾಷ್ಟ್ರದಲ್ಲಿ ಸಣ್ಣ ವ್ಯಾಪಾರಿಗಳು, ಹೂವು, ತರಕಾರಿ, ಊಟದ ಗಾಡಿ, ಮಾಂಸವನ್ನು ಮಾರಾಟ ಮಾಡುವವರು ಇಂತಹವರಿಗೆ ನೋಟಿಸ್ ಹೋಗಿಲ್ಲ.
ಕರ್ನಾಟಕದಲ್ಲಿ ಏಕೆ ನೋಟಿಸ್ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಸೇವಾ ವಲಯಕ್ಕೆ ತೆರಿಗೆ ವಿನಾಯಿತಿ ಇರುವಂತದ್ದು ವಾರ್ಷಿಕ ವಹಿವಾಟು ಒಂದೂವರೆ ಕೋಟಿ ರೂ ಮೀರಿದರೆ ಶೇ.1 ರಷ್ಟು ತೆರಿಗೆ. ಅದರಲ್ಲೂ ಶೇ.1 ರಲ್ಲಿ ಕೇಂದ್ರದ ಜಿಎಸ್‍ಟಿ ಶೇ.0.5 ರಷ್ಟು ಹೋದರೆ ರಾಜ್ಯದ ಎಸ್‍ಜಿಎಸ್‍ಟಿಗೆ ಶೇ.0.5 ರಷ್ಟು ಪಾವತಿಸುವ ಬಗ್ಗೆ ಪತ್ರಿಕೆಯಲ್ಲಿ ವಿವರವಾಗಿ ನಮೂದಿಸಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಕೇಂದ್ರದ ನೀತಿಯ ಪರಿಣಾಮವೆಂದು ಏಕೆ ಆರೋಪ ಹೊರಿಸುತ್ತೀರಿ, ನಿಮ್ಮ ಸರ್ಕಾರದ ಎಡವಟ್ಟು ಎಂದು ಮೊದಲು ಒಪ್ಪಿಕೊಳ್ಳಿ, ನೀವು ಕೊಟ್ಟಿರುವ ನೋಟಿಸ್ ವಾಪಸ್ ತೆಗೆದುಕೊಳ್ಳಿ. ಸಣ್ಣ ವ್ಯಾಪಾರಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ, ಸದರಿ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲವಿದೆ. ಬಿಜೆಪಿ ಮುಖಂಡರು ಕೂಡ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
PublicNext
22/07/2025 10:12 pm