ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್‌ ಮೇಲ್ದರ್ಜೆಗೇರಿಸಿ - ವಿಮಾನಯಾನ ಸಚಿವರಿಗೆ ಎಂ.ಬಿ ಪಾಟೀಲ್ ಮನವಿ

ನವದೆಹಲಿ : ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್‌ ಮೇಲ್ದರ್ಜೆಗೇರಿಸಿ ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರನ್ನ ಭೇಟಿಯಾಗಿ ಮನವಿ ಸಲ್ಲಿಸಿದರು.

ಪ್ರಾದೇಶಿಕ ಮತ್ತು ಆರ್ಥಿಕ ಅಭಿವೃದ್ಧಿ, ಹಾಗೂ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಈ ಭಾಗಗಳಿಗೆ ವಿಮಾನ ಸಂಪರ್ಕ ಸುಧಾರಣೆಯ ಅಗತ್ಯಗಳನ್ನು ಪರಿಗಣಿಸಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಬೇಕಿದೆ.

ಎರಡೂ ವಿಮಾನ ನಿಲ್ದಾಣಗಳಲ್ಲಿ ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹೊಸ ಟರ್ಮಿನಲ್‌ ನಿರ್ಮಿಸಲಾಗುತ್ತಿದೆ. ಎ321 ದರ್ಜೆಯ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗುವಂತೆ 12 ಪಾರ್ಕಿಂಗ್‌ ಬೇ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲೂ ಲ್ಯಾಂಡಿಂಗ್‌ ಆಗುವಂತೆ ಕ್ರಮ ವಹಿಸಲಾಗಿದೆ. ಜತೆಗೆ ಬೆಳಗಾವಿಯಿಂದ ಫೌಂಡ್ರಿ, ಏರೋಸ್ಪೇಸ್‌ ಸಾಧನಗಳು, ಅಲ್ಯುಮಿನಿಯಂ ಸಾಧನಗಳು, ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಪ್ರತ್ಯೇಕ ಟರ್ಮಿನಲ್‌ ಇದೆ. ಇದಲ್ಲದೆ ಬೆಳಗಾವಿಯಲ್ಲಿ 3 ವಿ.ವಿ,ಗಳು, 3 ಮೆಡಿಕಲ್‌ ಕಾಲೇಜುಗಳು, ಕೆಎಲ್‌ಇ ವಿವಿ ಎಲ್ಲವೂ ಇದ್ದು ವಿಶೇಷವಾಗಿ ಮಲೇಷ್ಯಾದಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಇನ್ನೊಂದೆಡೆ, ರಕ್ಷಣಾ ವಲಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಏರ್‌ಮೆನ್‌ ತರಬೇತಿ ಶಾಲೆ, ಕಮ್ಯಾಂಡೋ ತರಬೇತಿ ಕೇಂದ್ರ, ಜೂನಿಯರ್‌ ಲೀಡರ್ಸ್‌ ವಿಂಗ್‌, ಇನ್ಫೆಂಟ್ರಿ ಸ್ಕೂಲ್‌, ಮರಾಠಾ ಲಘು ಪದಾತಿ ದಳದ ಕೇಂದ್ರ ಮತ್ತು ಐಟಿಬಿಪಿ ತರಬೇತಿ ಕೇಂದ್ರಗಳಿವೆ. ಇವೆಲ್ಲವನ್ನೂ ಮೇಲ್ದರ್ಜೆಗೇರಿಸಲು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕೂಡ 16,900 ಚ.ಮೀ. ವಿಸ್ತೀರ್ಣದ ಹೊಸ ಟರ್ಮಿನಲ್‌ ನಿರ್ಮಿಸಲಾಗುತ್ತಿದ್ದು, ಎಬಿ320 ದರ್ಜೆಯ ವಿಮಾನಗಳ ನಿರ್ವಹಣೆ ಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಇಲ್ಲಿರುವ ಕಾರ್ಗೋ ಟರ್ಮಿನಲ್‌ನಲ್ಲಿ ಈಗ ವಾರ್ಷಿಕ 15 ಟನ್‌ ಸರಕು ಸಾಗಣೆ ಆಗುತ್ತಿದೆ. ಜತೆಗೆ ವರ್ಷಕ್ಕೆ 3 ಲಕ್ಷ ಪ್ರಯಾಣಿಕರ ನಿರ್ವಹಣೆ ನಡೆಯುತ್ತಿದೆ. ಮೊದಲಿನಿಂದಲೂ ವಾಣಿಜ್ಯ ವಲಯವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಐಐಟಿ, ಐಐಐಟಿ ಸಂಸ್ಥೆಗಳು ಬಂದಿದ್ದು, ಕಿಮ್ಸ್‌ ಆಸ್ಪತ್ರೆ ಕೂಡ ಗಮನ ಸೆಳೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.

755 ಎಕರೆ ಇರುವ ಬೆಳಗಾವಿ ಏರ್ಪೋರ್ಟ್‌ 1990ರಿಂದ ಮತ್ತು 957 ಎಕರೆ ಇರುವ ಹುಬ್ಬಳ್ಳಿ ಏರ್ಪೋರ್ಟ್‌ 1980ರಿಂದ ಸಕ್ರಿಯವಾಗಿವೆ. ಇವುಗಳನ್ನು ಅಂತಾರಾಷ್ಟ್ರೀಯ ಮೇಲ್ದರ್ಜೆಗೆ ಏರಿಸಿದರೆ ಮಧ್ಯಪ್ರಾಚ್ಯ ದೇಶಗಳು, ಸಿಂಗಪುರ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಸುಗಮ ವಿಮಾನ ಸಂಚಾರ ಸಾಧ್ಯವಾಗಲಿದೆ. ಜತೆಗೆ ಇ-ಕಾಮರ್ಸ್‌ ಅಭಿವೃದ್ಧಿಯಾಗಲಿದ್ದು, ಉತ್ತರ ಕರ್ನಾಟಕದ ಈ ಎರಡೂ ನಗರಗಳು ಲಾಜಿಸ್ಟಿಕ್ಸ್‌ ಹಬ್‌ ಆಗಿ ಬೆಳವಣಿಗೆಯಾಗಲಿವೆ ಎಂದು ಅವರು ಕೇಂದ್ರ ಸಚಿವರಿಗೆ ತಿಳಿಸಿದ್ದಾರೆ.

ಕೇಂದ್ರ ಸಚಿವರ ಭೇಟಿ ವೇಳೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್‌ ಉಪಸ್ಥಿತಿರಿದ್ದರು.

Edited By : Nagaraj Tulugeri
PublicNext

PublicNext

24/07/2025 10:00 pm

Cinque Terre

62.77 K

Cinque Terre

0

ಸಂಬಂಧಿತ ಸುದ್ದಿ