ಕಠ್ಮಂಡು: ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದೀಗ ಭೀಕರ ಘಟನೆ ನಡೆದಿದೆ. ಪ್ರತಿಭಟನಾಕಾರರು ನೇಪಾಳದ ವಿತ್ತ ಸಚಿವ ಬಿಷ್ಣು ಪೌಡೆಲ್ ಅವರನ್ನು ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಪ್ರಧಾನಿ ಕೆ. ಪಿ. ಶರ್ಮಾ ಒಲಿ ನೇತೃತ್ವದ ಸರ್ಕಾರದ ವಿತ್ತ ಸಚಿವರಾಗಿರುವ ಬಿಷ್ಣು ಪೌಡೆಲ್ ಅವರನ್ನು ಪ್ರತಿಭಟನಾಕಾರರು ದಾಳಿ ನಡೆಸಿ ಬೀದಿಯಲ್ಲೇ ಹಿಂಸಾತ್ಮಕವಾಗಿ ಹೊಡೆದಿದ್ದಾರೆ. ಸ್ಥಳೀಯರು ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಪ್ರಸ್ತುತ ವೈರಲ್ ಆಗಿರುವ ದೃಶ್ಯಗಳಲ್ಲಿ, 25ಕ್ಕೂ ಹೆಚ್ಚು ಮಂದಿ ಸಚಿವ ಪೌಡೆಲ್ ಅವರನ್ನು ಅಟ್ಟಾಡಿಸುತ್ತಾ ದಾಳಿಗೆ ಮುಂದಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಅತ್ತ ಪೌಡೆಲ್ ತಮ್ಮ ಜೀವ ಉಳಿಸಿಕೊಳ್ಳಲು ಓಡುತ್ತಿದ್ದರೆ, ಹಿಂಬಾಲಿಸುತ್ತಿದ್ದ ಪ್ರತಿಭಟನಾಕಾರರು ಹೊಡೆದಾಡುತ್ತಿರುವುದು ದೃಶ್ಯದಲ್ಲಿ ದಾಖಲಾಗಿದೆ. ಕೆಲವರು ಕೈಯಾರೆ ಹೊಡೆಯುತ್ತಿದ್ದರೆ, ಇತರರು ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಘಟನೆ ನೇಪಾಳದ ರಾಜಕೀಯ ಅಶಾಂತಿಗೆ ಮತ್ತಷ್ಟು ಬೆಂಕಿ ಎರಚಿದ್ದು, ದೇಶದ ಸ್ಥಿರತೆಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ.
PublicNext
09/09/2025 08:37 pm