ದಾವಣಗೆರೆ: ಮಾಡಿದ ಕೆಲಸಕ್ಕೆ ಬಿಲ್ ಬಿಡುಗಡೆ ಮಾಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಹನುಮಂತಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ಎಂಬುವರು ಜಗಳೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲೇ ಶನಿವಾರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
'ಪಂಚಾಯಿತಿ ಅಧಿಕಾರಿಗಳು ಹೇಳಿದಂತೆ ಭರಮಸಮುದ್ರ ಗ್ರಾಮದಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಮೋಟಾರು ರಿಪೇರಿ, ಬೀದಿ ದೀಪ, ಚರಂಡಿ ಸ್ವಚ್ಛತೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಿ ವರ್ಷವೇ ಕಳೆದಿದೆ. ಆದರೆ, ಮಾಡಿದ ಕೆಲಸಕ್ಕೆ ಬಿಲ್ ಕೊಡಲು ಪಿಡಿಒ ಕೊಟ್ರೇಶ್ ಸತಾಯಿಸುತ್ತಿದ್ದಾರೆ.
ಇದರಿಂದ ಸಾಲದ ಸುಳಿಗೆ ಸಿಲುಕಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಮೈಮೇಲೆ ಪೆಟ್ರೋಲ್ ಸುರಿದುಕೊಂಡರು. ಆಗ ಅಲ್ಲೇ ಇದ್ದ ಸಿಬ್ಬಂದಿ ತಕ್ಷಣ ಪೆಟ್ರೋಲ್ ಬಾಟಲ್ ಕಸಿದುಕೊಂಡು ಮೈಮೇಲೆ ನೀರು ಸುರಿದು ಸಮಾಧಾನ ಮಾಡಿದರು.
15ನೇ ಹಣಕಾಸು ಹಾಗೂ ವರ್ಗ 1ರಲ್ಲಿ ಬೇಕಾಬಿಟ್ಟಿ ಹಣ ಡ್ರಾ ಮಾಡಿರುವ ಪಿಡಿಒ ಕೊಟ್ರೇಶ್, ಕೆಲಸಕ್ಕೆ ಖರ್ಚು ಮಾಡಿದ ಹಣ ನೀಡಲು ಸತಾಯಿಸುತ್ತಾ ಬಂದಿದ್ದಾರೆ. ಕೇಳಿದರೆ ಬೆದರಿಕೆ ಹಾಕುತ್ತಾರೆ. ನಾನು ಕೂಲಿ ಮಾಡುವ ಬಡವ. ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದು ಕಷ್ಟವಾಗಿದೆ' ಎಂದು ಅಳಲು ತೋಡಿಕೊಂಡರು.
'ಪಿಡಿಒ ಕೊಟ್ರೇಶ್ ಬಗ್ಗೆ ಅನೇಕ ದೂರು ಬಂದಿದ್ದು ದೂರವಾಣಿ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಈ ಘಟನೆ ಕುರಿತು ಪೊಲೀಸ್ ಠಾಣೆ ಗಮನಕ್ಕೆ ತಂದಿದ್ದೇನೆ. ಪಂಚಾಯಿತಿ ಖಾತೆ ಲಾಕ್ ಮಾಡಿದ್ದು ಸೋಮವಾರ ಸಮಸ್ಯೆ ಬಗೆಹರಿಸಲಾಗುವುದು' ಎಂದು ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ ಭರವಸೆ ನೀಡಿದರು.
PublicNext
30/11/2025 04:18 pm
LOADING...