ದಾವಣಗೆರೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ಬಾಂಬ್‌ಗಳನ್ನು ಶೀಘ್ರದಲ್ಲೇ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಪೊಲೀಸರು ತೀವ್ರ ತಪಾಸಣೆ ನಡೆಸಿದರು.
ಜಿಲ್ಲಾಧಿಕಾರಿಗಳ ಇಮೇಲ್‌ಗೆ ಡಿಸೆಂಬರ್ 14ರಂದು ಈ ಬೆದರಿಕೆ ಪತ್ರ ಬಂದಿದ್ದು, ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಪಾಕಿಸ್ತಾನ್ ಐಎಸ್ಐ ಸೆಲ್ಸ್ ಇನ್ ತಮಿಳುನಾಡು ಡಿವಿಜನ್' ಎಂಬ ಹೆಸರಿನಲ್ಲಿ ಬಂದಿರುವ ಈ ಇಮೇಲ್‌ನಲ್ಲಿ, "ಡಿಎಂಕೆ 2016ರ ಚುನಾವಣೆಯ ಗಮನವನ್ನು ಬೇರೆಡೆ ಸೆಳೆಯಲು ನಿಮ್ಮ ಕಚೇರಿಗೆ ಐದು ಬಾಂಬ್ ಇಡಲಾಗುವುದು" ಎಂದು ಬೆದರಿಕೆ ಹಾಕಲಾಗಿದೆ.
ಬೆದರಿಕೆ ಸಂದೇಶ ಬರುತ್ತಿದ್ದಂತೆಯೇ, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್ ಅವರು ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಿದರು. ಕೂಡಲೇ ಎಚ್ಚೆತ್ತ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಅವರ ನೇತೃತ್ವದಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಕಚೇರಿಯುದ್ದಕ್ಕೂ ತೀವ್ರ ತಪಾಸಣೆ ನಡೆಸಲಾಯಿತು.
ಇತ್ತೀಚೆಗೆ ತುಮಕೂರು, ವಿಜಯಪುರ, ಗದಗ, ಕೋಲಾರ ಮತ್ತು ಮಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಪೊಲೀಸರು ತಪಾಸಣೆ ನಡೆಸಿದಾಗ ಅವೆಲ್ಲವೂ ಹುಸಿ ಬೆದರಿಕೆಗಳೆಂದು ದೃಢಪಟ್ಟಿದ್ದವು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಈ ಬಾಂಬ್ ಬೆದರಿಕೆ ಕುರಿತು ಪೊಲೀಸರು ತೀವ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ತಿಳಿಸಿದ್ದಾರೆ.
PublicNext
16/12/2025 09:40 pm