ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಲೆಕ್ಕಾಚಾರಗಳು ಏನೇ ಇದ್ದರೂ, ಬಿಗ್ ಬಾಸ್ ಆಡಿಸುವ ಆಟದ ಮುಂದೆ ಎಲ್ಲವೂ ಉಲ್ಟಾಪಲ್ಟಾ ಆಗುವುದು ಸಾಮಾನ್ಯ. ಇದೀಗ 'ಸೀಕ್ರೆಟ್ ರೂಮ್' ಬಾಗಿಲು ಮತ್ತೆ ತೆರೆದಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಸುಮಾರು ಆರು ಸೀಸನ್‌ಗಳ ನಂತರ ಬಿಗ್ ಬಾಸ್ ಮನೆಯ 'ಸೀಕ್ರೆಟ್ ರೂಮ್' ಬಾಗಿಲು ತೆರೆದಿದ್ದು, ಧ್ರುವಂತ್ ಹಾಗೂ ರಕ್ಷಿತಾ ಎಲಿಮಿನೇಟ್ ಆಗಿಲ್ಲ, ಬದಲಿಗೆ ಈ ವಿಶೇಷ ಕೋಣೆಗೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಧ್ರುವಂತ್ ಹಾಗೂ ರಕ್ಷಿತಾಗೆ ದೊಡ್ಡ ಆಘಾತದ ಜೊತೆಗೆ ಖುಷಿಯ ವಿಚಾರವನ್ನೂ ನೀಡಿದ್ದಾರೆ.
ಮನೆಯ ಸದಸ್ಯರು ಊಹಿಸದ ರೀತಿಯಲ್ಲಿ ಈ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಧ್ರುವಂತ್ ಮತ್ತು ರಕ್ಷಿತಾ ಸೀಕ್ರೆಟ್ ರೂಮ್‌ನಿಂದಲೇ ಮನೆಯೊಳಗಿನ ಎಲ್ಲ ಮಾತುಕತೆಗಳನ್ನು ಕೇಳಿಸಿಕೊಳ್ಳುತ್ತಾ, ಪ್ರತಿಯೊಬ್ಬ ಸ್ಪರ್ಧಿಯನ್ನೂ ವೀಕ್ಷಿಸುತ್ತಿದ್ದಾರೆ.
ಮನೆಯವರು ರಕ್ಷಿತಾ ಕುರಿತು ಧನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದನ್ನು ಕೇಳಿ ಅವರು ಭಾವುಕರಾಗಿದ್ದರು. ಆದರೆ, ಧ್ರುವಂತ್ ಮತ್ತು ರಕ್ಷಿತಾ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ಸ್ಪಷ್ಟ. ಜೊತೆಯಾಗಿರುವುದು ಅವರಿಬ್ಬರಿಗೂ ದೊಡ್ಡ ಸವಾಲಾಗಿದೆ.
ಹಿಂದೆ ಹೇಳಿದಂತೆ, ಬಹಳ ವರ್ಷಗಳ ನಂತರ ಸೀಕ್ರೆಟ್ ರೂಮ್ ಬಾಗಿಲು ತೆರೆದಿರುವುದು ಈ ಸೀಸನ್‌ನ ವಿಶೇಷ. ಬಿಗ್ ಬಾಸ್ ಸೀಸನ್ 3ರಲ್ಲಿ ಪೂಜಾ ಗಾಂಧಿ ಸೀಕ್ರೆಟ್ ರೂಮ್‌ಗೆ ಹೋಗಿದ್ದರು. ನಂತರ ಸೀಸನ್ 4ರಲ್ಲಿ ಹೆಚ್ಚು ಸೀಕ್ರೆಟ್ ರೂಮ್‌ಗಳು ತೆರೆದಿದ್ದವು. ಶಾಲಿನಿ ಮತ್ತು ಶೀತಲ್ ಶೆಟ್ಟಿ ಇಬ್ಬರೂ ಸೀಕ್ರೆಟ್ ರೂಮ್‌ನಲ್ಲಿ ಕೆಲವು ವಾರಗಳ ಕಾಲ ಇದ್ದರು. ಅದೇ ಸೀಸನ್‌ನ ಕೊನೆಯ ವಾರಗಳಲ್ಲಿ, ಪ್ರಥಮ್ ಮತ್ತು ಮಾಳವಿಕಾ ಆಶ್ಚರ್ಯಕರವಾಗಿ ಎಲಿಮಿನೇಟ್ ಆಗಿ ಸೀಕ್ರೆಟ್ ರೂಮ್ ಸೇರಿದ್ದರು.
ಸೀಸನ್ 5ರಿಂದ ಸೀಕ್ರೆಟ್ ರೂಮ್ ಪರಿಕಲ್ಪನೆಗೆ ಕತ್ತರಿ ಬಿದ್ದಿತ್ತು. ಸುಮಾರು ಆರು ಸೀಸನ್‌ಗಳ ನಂತರ ಧ್ರುವಂತ್ ಹಾಗೂ ರಕ್ಷಿತಾಗೆ ಸೀಕ್ರೆಟ್ ರೂಮ್ ತೆರೆದಿರುವುದು ಪ್ರೇಕ್ಷಕರಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶೇಷವೆಂದರೆ, ಇಬ್ಬರಿಗೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಈಗಾಗ್ಲೆ ಪ್ರಸಾರವಾದ ಸಂಚಿಕೆಯಲ್ಲಿ ಇವರಿಬ್ಬರ ನಡುವಿನ ಸಂಭಾಷಣೆ, ಕಚ್ಚಾಟ ಹಾಗೂ ವಾಗ್ವಾದಗಳು ವೀಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿವೆ.
PublicNext
16/12/2025 01:48 pm