ಬೆಳಗಾವಿ: ರಾಜ್ಯದಲ್ಲಿ 15 ವರ್ಷ ಪೂರೈಸಿದ ಹಳೆಯ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ ಹಾಗೂ ಸರ್ಕಾರದ ಇತರೆ ಅಧೀನ ಸಂಸ್ಥೆಗಳಿಗೆ ಸೇರಿದ ನೋಂದಣಿಯಾಗಿ 15 ವರ್ಷ ಮೀರಿದ ವಾಹನಗಳನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಸ್ಥಾಪಿತವಾಗಿರುವ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಕೇಂದ್ರಗಳಲ್ಲಿಯೇ ಸ್ಕ್ರ್ಯಾಪ್ ಮಾಡಲು ಕಳೆದ ಸೆಪ್ಟೆಂಬರ್ 12 ರಂದು ಸರ್ಕಾರ ಅನುಮೋದನೆ ನೀಡಿದೆ.
ಪರಿಷತ್ತಿನಲ್ಲಿ ಸದಸ್ಯ ಗೋವಿಂದ ರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಎನ್.ಐ.ಸಿ. ಒದಗಿಸಿದ ಮಾಹಿತಿಯಂತೆ ಡಿಸೆಂಬರ್ 4ರ ಅಂತ್ಯಕ್ಕೆ 15 ವರ್ಷದ ಅವಧಿ ಮೀರಿದ ಒಟ್ಟು 18,552 ಸರ್ಕಾರಿ ವಾಹನಗಳ ನೋಂದಣಿಯನ್ನು ಕೇಂದ್ರ ಸರ್ಕಾರವು 'ವಾಹನ್' ಪೋರ್ಟಲ್‌ನಲ್ಲಿ ರದ್ದುಪಡಿಸಿದೆ. ಈ 18,552 ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 1,493 ವಾಹನಗಳನ್ನು ಆರ್‌ವಿಎಸ್‌ಎಫ್‌ಗಳಲ್ಲಿ ಸ್ಕ್ರ್ಯಾಪ್ ಮಾಡಲಾಗಿದೆ. ಉಳಿದ 17,059 ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಬಾಕಿ ಇದೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಇದಲ್ಲದೆ, 2023 ರಿಂದ ಇಲ್ಲಿಯವರೆಗೆ ರಾಜ್ಯದ ನಾಲ್ಕು ನಿಗಮ ಸಂಸ್ಥೆಗಳಲ್ಲಿ ಒಟ್ಟು 3,212 ವಾಹನಗಳು ನಿಷ್ಕ್ರಿಯಗೊಂಡಿವೆ. ಇನ್ನೂ 579 ವಾಹನಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಬಾಕಿ ಇದೆ ಎಂದು ಸಚಿವರು ಮಾಹಿತಿ ನೀಡಿದರು.
PublicNext
17/12/2025 05:36 pm
LOADING...