ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನು ಆರಂಭಿಸಿತ್ತು. ಈ ಕಾರ್ಯಾಚರಣೆಯ ಬಗ್ಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ನೀಡಿರುವ ಹೇಳಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. "ಆಪರೇಷನ್ ಸಿಂಧೂರ್ ಆರಂಭಿಸಿದ ಮೊದಲ ದಿನವೇ ಭಾರತ ಸೋಲನ್ನು ಅನುಭವಿಸಿತು" ಎಂದು ಅವರು ಹೇಳಿದ್ದು, ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ.
ತಮ್ಮ ಹೇಳಿಕೆಗೆ ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪೃಥ್ವಿರಾಜ್ ಚವಾಣ್, "ನಾನು ಯಾವುದೇ ತಪ್ಪು ಹೇಳಿಲ್ಲ ಮತ್ತು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸಂವಿಧಾನವು ನನಗೆ ಪ್ರಶ್ನಿಸುವ ಹಕ್ಕನ್ನು ನೀಡಿದೆ" ಎಂದು ಸಮರ್ಥಿಸಿಕೊಂಡಿದ್ದಾರೆ.
ಆಪರೇಷನ್ ಸಿಂಧೂರ್‌ನ ಮೊದಲ ದಿನದಂದೇ ಭಾರತ ಸೋತಿತು ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, "ಆಪರೇಷನ್ ಸಿಂಧೂರ್‌ನ ಮೊದಲ ದಿನದಂದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು ಮತ್ತು ಭಾರತ ಸಂಪೂರ್ಣವಾಗಿ ಸೋತಿತ್ತು" ಎಂದು ಹೇಳಿದ್ದಾರೆ.
ಚವಾಣ್ ತಮ್ಮ ಹೇಳಿಕೆಯನ್ನು ಇನ್ನಷ್ಟು ವಿಸ್ತರಿಸಿ, "ಆಪರೇಷನ್ ಸಿಂಧೂರ್‌ನ ಮೊದಲ ದಿನದಂದೇ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಮೇ 7ರಂದು ನಡೆದ ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಭಾರತದ ವಾಯುಪಡೆ ಸಂಪೂರ್ಣವಾಗಿ ನೆಲಸಮವಾಗಿತ್ತು. ನಮ್ಮ ಒಂದೇ ಒಂದು ವಿಮಾನವೂ ಹಾರಲಿಲ್ಲ" ಎಂದು ವಿವರಿಸಿದ್ದಾರೆ.
ಅಲ್ಲದೆ, "ಇತ್ತೀಚೆಗೆ, ಆಪರೇಷನ್ ಸಿಂಧೂರ್ ಸಮಯದಲ್ಲಿ, ಮಿಲಿಟರಿಯ ಒಂದು ಕಿಲೋಮೀಟರ್ ಚಲನೆಯೂ ಇರಲಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಕೇವಲ ವೈಮಾನಿಕ ಯುದ್ಧ ಮತ್ತು ಕ್ಷಿಪಣಿ ಯುದ್ಧ ನಡೆಯಿತು. ಭವಿಷ್ಯದಲ್ಲಿಯೂ ಸಹ ಯುದ್ಧಗಳು ಅದೇ ರೀತಿಯಲ್ಲಿ ನಡೆಯುತ್ತವೆ. ಹಾಗಿದ್ದ ಮೇಲೆ ನಾವು ನಿಜವಾಗಿಯೂ 12 ಲಕ್ಷ ಸೈನಿಕರ ಸೈನ್ಯವನ್ನು ನಿರ್ವಹಿಸುವ ಅಗತ್ಯವಿದೆಯೇ? ಅಷ್ಟು ದೊಡ್ಡ ಸೇನಾಪಡೆ ನಮಗೆ ನಿಜಕ್ಕೂ ಅನಿವಾರ್ಯವೇ? ನಾವು ಅವರನ್ನು ಬೇರೆ ಏನಾದರೂ ಕೆಲಸ ಮಾಡುವಂತೆ ಮಾಡಬಹುದಲ್ಲವೇ?" ಎಂದು ಪ್ರಶ್ನಿಸುವ ಮೂಲಕ ಸೇನಾಪಡೆಯ ಗಾತ್ರ ಮತ್ತು ಅದರ ಅಗತ್ಯದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
PublicNext
17/12/2025 10:26 pm