ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ-ಇಥಿಯೋಪಿಯಾ ಬಾಂಧವ್ಯ : ಮೂರು ಮಹತ್ವದ ಒಪ್ಪಂದಗಳಿಗೆ ಸಹಿ

ಅಡಿಸ್‌ ಅಬಾಬಾ : ಪ್ರಧಾನಿ ನರೇಂದ್ರ ಮೋದಿ ಅವರ ಇಥಿಯೋಪಿಯಾ ಭೇಟಿ ವೇಳೆ, ಕಸ್ಟಮ್ಸ್‌ ವಿಷಯಗಳಲ್ಲಿ ಪರಸ್ಪರ ಆಡಳಿತಾತ್ಮಕ ನೆರವು, ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆ ತರಬೇತಿ ಹಾಗೂ ಇಥಿಯೋಪಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ದತ್ತಾಂಶ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ ಮೂರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ಒಪ್ಪಂದಗಳಿಗೆ ಅಂಕಿತ ಹಾಕುವ ಮುನ್ನ ಪ್ರಧಾನಿ ಮೋದಿ ಅವರು ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್‌ ಅಲಿ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದರು.

ಈ ಒಪ್ಪಂದಗಳನ್ನು "ಜನ ಕೇಂದ್ರಿತ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ" ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಉಭಯ ದೇಶಗಳ ನಡುವೆ ಕಾರ್ಯತಂತ್ರದ ಪಾಲುದಾರಿಕೆಯನ್ನು ನವೀಕರಿಸಲು, ಜಿ–20 ಅಡಿಯಲ್ಲಿ ಸಾಲ ಪುನರ್‌ರಚನೆಗೆ ಸಹಕಾರ ನೀಡಲು, ಹಾಗೂ ಶಿಕ್ಷಣ, ಆರೋಗ್ಯ, ಸಂಸ್ಕೃತಿ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ವೃದ್ಧಿಸಲು ಉಭಯ ನಾಯಕರು ಸಮ್ಮತಿಸಿದರು.

"ಎರಡೂ ದೇಶಗಳ ನಡುವೆ ದೀರ್ಘಕಾಲೀನ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಯಲ್ಲಿ ಇವು ಪ್ರಮುಖ ನಿರ್ಧಾರಗಳಾಗಿವೆ" ಎಂದು ಪ್ರಧಾನಿ ಮೋದಿ 'ಎಕ್ಸ್‌' (ಹಿಂದಿನ ಟ್ವಿಟರ್‌) ನಲ್ಲಿ ಪೋಸ್ಟ್‌ ಮಾಡಿದ್ದಾರೆ. "ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಇಥಿಯೋಪಿಯಾ ಬಲವಾದ ಬೆಂಬಲ ವ್ಯಕ್ತಪಡಿಸಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ಸಂಬಂಧ) ಸುಧಾಕರ್‌ ದಲೇಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಥಿಯೋಪಿಯಾದ ಸಂಸತ್ತಿನಲ್ಲಿ ಬುಧವಾರ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ, ಭಾರತ ಮತ್ತು ಇಥಿಯೋಪಿಯಾ ದೇಶಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ "ನೈಸರ್ಗಿಕ ಪಾಲುದಾರರು" ಎಂದು ಬಣ್ಣಿಸಿದರು. "ಎರಡೂ ದೇಶಗಳ ಪೂರ್ವಿಕರು ಕೇವಲ ಪದಾರ್ಥಗಳನ್ನಷ್ಟೇ ಅಲ್ಲದೆ, ವಿಚಾರ ಮತ್ತು ಜೀವನ ವಿಧಾನವನ್ನು ವಿನಿಮಯ ಮಾಡಿಕೊಂಡಿದ್ದಾರೆ" ಎಂದು ಅವರು ಹೇಳಿದರು. "ಪ್ರಜಾಪ್ರಭುತ್ವವು ಒಂದು ಜೀವನ ವಿಧಾನ ಮತ್ತು ಪ್ರಯಾಣ ಎಂಬುದನ್ನು ಎರಡೂ ದೇಶಗಳು ಅರಿತುಕೊಂಡಿವೆ" ಎಂದು ಮೋದಿ ವಿವರಿಸಿದರು. ಇಥಿಯೋಪಿಯಾ ಸಂಸತ್ತು, ಮೋದಿ ಅವರು ಭಾಷಣ ಮಾಡಿದ ವಿಶ್ವದ 18ನೇ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಒಪ್ಪಂದಗಳ ಸಹಿ ಪ್ರಕ್ರಿಯೆಯ ನಂತರ, ಪ್ರಧಾನಿ ಮೋದಿ ಅವರು ಬುಧವಾರ ಇಥಿಯೋಪಿಯಾದಿಂದ ಒಮನ್‌ಗೆ ತೆರಳಿದರು.

Edited By : Nirmala Aralikatti
PublicNext

PublicNext

18/12/2025 02:44 pm

Cinque Terre

12.99 K

Cinque Terre

0

ಸಂಬಂಧಿತ ಸುದ್ದಿ