ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಮೇಶ್ ಜಾರಕಿಹೊಳಿ-ಸಿಎಂ ಭೇಟಿ 'ಡಿಕೆ'ಗೆ ಚೆಕ್ ಮೇಟ್?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಬುಧವಾರದ ಅಧಿವೇಶನದಲ್ಲಿ ಕಾಣದಿದ್ದಾಗ ಅವರಿವರ ಬಾಯಿಂದ ಕೇಳಿ ಬಂದ ಮಾತೇ 'ಅವರಿಗೆ ಹೊಟ್ಟೆ ನೋವು' ಎಂದು! ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿರುವ ಸಿಎಂ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಬರಲು ಕಾರಣವೇನು? ಈ ಮೊದಲು ಅವರಿಗೆ ಯಾವ ಹೊಟ್ಟೆ ನೋವು ಇರಲಿಕ್ಕಿಲ್ಲ.. ಆದರೆ, ಹೊಟ್ಟೆ ನೋವಿನ ನೆಪದಲ್ಲಿ ಸರ್ಕ್ಯೂಟ್ ಹೌಸ್ ನಲ್ಲಿ ತಮ್ಮ ಆಪ್ತರೊಂದಿಗೆ ಅಧಿಕಾರ ಹಂಚಿಕೆಯ ಸಾಧಕ-ಬಾಧಕಗಳ ಕುರಿತು ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆಂದೂ ಕೆಲವರು ಆಡಿಕೊಂಡದ್ದು ಉಂಟು. ಇದರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಅಂತಾ ತಲೆಕೆಡಿಸುಕೊಳ್ಳುವ ಅಗತ್ಯವಿಲ್ಲ. ಆದರೆ, ಶಾಸಕ ರಮೇಶ್ ಜಾರಕಿಹೊಳಿಯವರು ಯಾರೂ ಇಲ್ಲದ ವೇಳೆ ಏಕಾಂಗಿಯಾಗಿ ಬಂದು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಒಂದು ಗಂಟೆಗಳ ಕಾಲ ಚರ್ಚೆ ಮಾಡಿದ್ದಾರೆ ಅನ್ನೋದು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಏಕೆಂದರೆ, 2019ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು 19 ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಬರುವ ಮೂಲಕ ಅಂದಿನ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿ ಬೀಳುವಂತೆ ಮಾಡಿದ್ದುದು ಇದೇ ರಮೇಶ್ ಜಾರಕಿಹೊಳಿಯವರು! ಈಗ ಕಾಂಗ್ರೆಸ್ ಪಕ್ಷವು 136 "ಪ್ಲಸ್" ಶಾಸಕರ ಬಲ ಹೊಂದಿದ್ದರೂ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಕುತ್ತು ಬಂದಿದ್ದು, ಅದಕ್ಕಾಗಿ ತೆರೆಮರೆಯಲ್ಲಿ ಸಿದ್ದು ಪಡೆ ಕಾರ್ಯತಂತ್ರವನ್ನು ಹೆಣೆಯುತ್ತಿದೆ ಎಂಬ ಮಾತೂ ಚಾಲ್ತಿಯಲ್ಲಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ 'ವೋಟ್ ಚೋರಿ' ಹೋರಾಟದ ನೆಪದಲ್ಲಿ ದೆಹಲಿಗೆ ಹೋಗಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಪೈಕಿ ಕಾಂಗ್ರೆಸ್ ಹೈಕಮಾಂಡ್ ಸಿದ್ದುಗೆ ಮಣೆ ಹಾಕದೇ ಕಳುಹಿಸಿರೋದು ಜೊತೆಗೆ ಡಿಕೆಶಿ ಅವರನ್ನು ಅಂದು ರಾತ್ರಿಯ ಭೋಜನಕೂಟಕ್ಕೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ನಾನಾ ಅರ್ಥಗಳಿಗೆ ಎಡೆಮಾಡಿಕೊಟ್ಟಿದೆ.

ಮೂಲಗಳ ಪ್ರಕಾರ, ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬಂದಿದೆ. ಅದು ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನಡೆಯುತ್ತೆ ಎಂದು ಹೇಳಲಾಗುತ್ತೆ. ಅಂದು ದೆಹಲಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬಂದಿರುವ "ಡಿಕೆ" ಜನವರಿ ತಿಂಗಳಲ್ಲೇ ಸಿಎಂ ಪಟ್ಟಕ್ಕೆ ಏರುತ್ತಾರೆಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಆದರೆ, ಇದಕ್ಕೆ ಒಪ್ಪದ "ಸಿದ್ದು" ಪಡೆ ಅಹಿಂದ ಬೃಹತ್ ಸಮಾವೇಶವನ್ನು ಮಾಡುವ ಮೂಲಕ ತಮ್ಮ ಶಕ್ತಿಯ ಪ್ರದರ್ಶನಕ್ಕೆ ತೆರೆಮರೆಯಲ್ಲೇ ಸಿದ್ಧತೆ ನಡೆಸಿದೆ! ಹಾಗಾದರೆ, ಮುಂದೇನು? ಎಂಬ‌ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಎಷ್ಟು ಸಾಧ್ಯವೋ ಅಷ್ಟು ದಿನ ಅಧಿಕಾರ ಹಸ್ತಾಂತರದ 'ಮ್ಯಾಟರ್' ಅನ್ನು ಮುಂದಕ್ಕೆ ತಳ್ಳುವುದಾಗಿದೆ. ಇಲ್ಲವೇ ಹೈಕಮಾಂಡ್ ಗೆ ಪರೋಕ್ಷವಾಗಿ ತಮ್ಮ ಶಕ್ತಿ ಏನೆಂಬುದನ್ನು ತೋರಿಸುವ ಮೂಲಕ ಬೆದರಿಕೆ ಒಡ್ಡುವುದು. ಇದರ ಭಾಗವೆಂಬಂತೆ ನಿನ್ನೆ, ಒಂದು ಕಾಲದ ತಮ್ಮ ಶಿಷ್ಯ ರಮೇಶ್ ಜಾರಕಿಹೊಳಿಯವರನ್ನು ಕರೆಯಿಸಿಕೊಂಡು ಸಿಎಂ ಅವರು ಮಾತುಕತೆ ನಡೆಸಿರೋದು ಅಂತಾ ಹೇಳಲಾಗುತ್ತೆ. ಏಕೆಂದರೆ, ಕಾಕತಾಳೀಯವೆಂಬಂತೆ ಈ ಹಿಂದೆ ಸಿದ್ದರಾಮಯ್ಯ ಅವರು ಚಿಕಿತ್ಸೆಗೆಂದು ಧರ್ಮಸ್ಥಳದ ಶಾಂತಿ ವನದಲ್ಲಿರುವಾಗಲೇ

ಅಂದಿನ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಖೆಡ್ಡಾ ತೋಡಲಾಗಿತ್ತು ಅನ್ನೋದನ್ನು ಜನ ಇನ್ನೂ ಮರೆತಿಲ್ಲ.

ಇದೀಗ ಹೊಟ್ಟೆ ನೋವಿನಲ್ಲಿದ್ದ ಸಿಎಂ ಸಿದ್ದರಾಮಯ್ಯ ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳಲೆಂದು ಬಂದ ರಮೇಶ್ ಜಾರಕಿಹೊಳಿ ಅವರ ಈ ಭೇಟಿ ರಾಜಕೀಯ ಚದುರಂಗದಾಟದಲ್ಲಿ ಡಿಕೆಶಿಗೆ ಚೆಕ್ ಮೇಟ್ ಇಟ್ಟಂತಾಗಿದೆ!

ಚೆನ್ನವೀರ ಸಗರನಾಳ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By : Nirmala Aralikatti
PublicNext

PublicNext

18/12/2025 06:07 pm

Cinque Terre

18.05 K

Cinque Terre

0

ಸಂಬಂಧಿತ ಸುದ್ದಿ