ಹೈದರಾಬಾದ್ : ಸೆಲೆಬ್ರಿಟಿಗಳನ್ನು ನೋಡಿದಾಗ ಅಭಿಮಾನಿಗಳು ಮುಗಿಬೀಳುವುದು ಸಹಜ. ಆದರೆ, ಹಲವು ಬಾರಿ ಅಭಿಮಾನಿಗಳ ಅತಿರೇಕದ ವರ್ತನೆ ನಟ-ನಟಿಯರಿಗೆ ತೀವ್ರ ಮುಜುಗರ ಮತ್ತು ಸಮಸ್ಯೆ ತಂದೊಡ್ಡಿದೆ. ಇದಕ್ಕೆ ನಟಿ ನಿಧಿ ಅಗರ್ವಾಲ್ ಕೂಡ ಹೊರತಾಗಿಲ್ಲ.
ಇತ್ತೀಚೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿಧಿ ಅಗರ್ವಾಲ್, ವಾಪಸ್ ತೆರಳುವಾಗ ಕಹಿ ಅನುಭವ ಎದುರಿಸಿದ್ದಾರೆ. ಅಭಿಮಾನಿಗಳ ದಟ್ಟಣೆ ಮಧ್ಯೆ ಸಿಕ್ಕಿಹಾಕಿಕೊಂಡು ಅವರು ತೀವ್ರ ಕಸಿವಿಸಿ ಅನುಭವಿಸಿದ್ದು, ಈ ಕುರಿತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'ದಿ ರಾಜಾ ಸಾಬ್' ಚಿತ್ರದ ಎರಡನೇ ಹಾಡು ʻಸಹನಾ ಸಹನಾʼ ಬುಧವಾರ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಹೈದರಾಬಾದ್‌ನ ಮಾಲ್‌ವೊಂದರಲ್ಲಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನು ಅನಾವರಣಗೊಳಿಸಲಾಯಿತು. ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ನಿರ್ದೇಶನದ ಈ ಚಿತ್ರ ಒಂದು ಹಾರರ್ ಕಾಮಿಡಿ ಕಥಾಹಂದರ ಹೊಂದಿದೆ.
ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದ ನಿಧಿ ಅಗರ್ವಾಲ್‌ರನ್ನು ಪ್ರಭಾಸ್ ಅಭಿಮಾನಿಗಳು ದಿಢೀರನೆ ಮುತ್ತಿಕೊಂಡರು. ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು, ಕೆಲವರು ಆಕೆಯನ್ನು ಮುಟ್ಟುವ ಪ್ರಯತ್ನ ಕೂಡ ಮಾಡಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಆಕೆಯ ಬಾಡಿಗಾರ್ಡ್‌ಗಳು ಹೇಗೋ ಅವರನ್ನು ಸುರಕ್ಷಿತವಾಗಿ ಕಾರು ಹತ್ತಿಸಿದರು. ಸೆಲ್ಫಿಗಾಗಿ ಮುಗಿಬಿದ್ದು, ಕೆಲವರು ಆಕೆಯನ್ನು ಮುಟ್ಟುವ ಪ್ರಯತ್ನ ಕೂಡ ಮಾಡಿದ್ದರಿಂದ, ಕೆಲ ಕ್ಷಣಗಳ ಕಾಲ ಪರಿಸ್ಥಿತಿ ಸಂಪೂರ್ಣವಾಗಿ ಕೈ ಮೀರಿತ್ತು.
ವೈರಲ್ ಆಗಿರುವ ವಿಡಿಯೋದಲ್ಲಿ ಈ ಘಟನೆ ಸ್ಪಷ್ಟವಾಗಿ ದಾಖಲಾಗಿದೆ. ಒಂದು ಹಂತದಲ್ಲಿ ನಿಧಿ ಕಾರು ಹತ್ತುವುದೇ ಕಷ್ಟ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಕಾರಿನೊಳಗೆ ಕುಳಿತ ನಂತರವಷ್ಟೇ ನಿಧಿ ನಿಟ್ಟುಸಿರು ಬಿಟ್ಟರು. ಈ ಘಟನೆಗೆ ಹಲವು ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
18/12/2025 08:23 pm