ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದ್ದಾರೆ. ಸದಾ ಟಾಸ್ಕ್, ಜಗಳ, ಕೂಗಾಟದಿಂದ ತುಂಬಿರುವ ದೊಡ್ಮನೆಯಲ್ಲಿ, ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಪ್ರೇಮಲೋಕದ ಕಥೆಯನ್ನು ಮನಬಿಚ್ಚಿ ತೆರೆದಿಟ್ಟರು.ಸ್ಪರ್ಧಿಗಳೊಂದಿಗೆ ತಮ್ಮ ಜೀವನದ ಪ್ರೀತಿಯ ಅನುಭವಗಳನ್ನು ಹಂಚಿಕೊಂಡು, ಮನೆಯ ವಾತಾವರಣವನ್ನೇ ಪ್ರೇಮಮಯವಾಗಿಸಿದರು.
ಸ್ಯಾಂಡಲ್‌ವುಡ್‌ನಲ್ಲಿ 'ಪ್ರೇಮಲೋಕ'ವನ್ನು ತೆರೆದಿಟ್ಟವರು ಕ್ರೇಜಿಸ್ಟಾರ್ ರವಿಚಂದ್ರನ್. ಅವರ ಬಹುಪಾಲು ಸಿನಿಮಾಗಳು ಪ್ರೀತಿ, ಪ್ರೇಮ, ಪ್ರಣಯವನ್ನೇ ಆಧರಿಸಿವೆ. ಹೀಗಿರುವಾಗ, ರವಿಚಂದ್ರನ್ ಅವರ ನಿಜ ಜೀವನದ ಪ್ರೇಮ ಕಥೆ ಹೇಗಿತ್ತು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ. ಈ ಕುತೂಹಲವನ್ನು ತಣಿಸುವ ಸೌಭಾಗ್ಯ ಬಿಗ್ ಬಾಸ್ ಸ್ಪರ್ಧಿಗಳಿಗೆ ದೊರಕಿದೆ.
ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಕುಳ್ಳಿರಿಸಿಕೊಂಡು ರವಿಚಂದ್ರನ್ ತಮ್ಮ ಕಾಲೇಜು ದಿನಗಳ ಮೊದಲ ಪ್ರೇಮ ಕಥೆಯನ್ನು ನೆನಪಿಸಿಕೊಂಡರು. "ನಾನಿನ್ನ ಮರೆಯಲಾರೆ ಸಿನಿಮಾದಲ್ಲಿ ರಾಜ್‌ಕುಮಾರ್ ಅವರು ಓಡಿಸಿದ್ದ ಬೈಕ್‌ನಲ್ಲಿ ಕಾಲೇಜಿಗೆ ಎಂಟ್ರಿಯಾದೆ. ಆಗ ಅಲ್ಲೇ 10-15 ಹುಡುಗಿಯರು ನಿಂತಿದ್ದರು. ನನ್ನ ಮೋಟರ್‌ಬೈಕ್‌ನ ಸದ್ದಿಗೆ ಒಬ್ಬ ಹುಡುಗಿ ತಿರುಗಿ ನೋಡಿದಳು. ಇವತ್ತಿಗೂ ಆ ಕ್ಷಣವನ್ನು ನಾನು ಮರೆತಿಲ್ಲ. ಅವಳೇ ನಾನು ಮೊದಲು ಪ್ರೀತಿಸಿದ ಹುಡುಗಿ" ಎಂದು ರವಿಚಂದ್ರನ್ ತಮ್ಮ ಪ್ರೀತಿಯ ಮೊದಲ ಹೆಜ್ಜೆಯನ್ನು ವಿವರಿಸಿದರು.
"ಅವಳಿಗೆ 'ಐ ಲವ್ ಯು' ಎಂದು ಹೇಳಲು ಒಂದು ವರ್ಷ ಬೇಕಾಯಿತು. ಒಂದು ವರ್ಷದ ಕಾಲ ಕಣ್ಣಲ್ಲೇ ನಾವು ಪ್ರೀತಿ ಮಾಡಿದ್ದೆವು. ಒಂದು ದಿನ ಹೇಗಾದರೂ ಅವಳನ್ನು ಮಾತಾಡಿಸಲೇಬೇಕು ಎಂದು ಕಾರಿನಲ್ಲಿ ಕಾಲೇಜಿಗೆ ಹೋಗಿದ್ದೆ. ನಡೆದುಕೊಂಡು ಹೋಗುತ್ತಿದ್ದ ಅವಳ ಬಳಿ ಕಾರು ನಿಲ್ಲಿಸಿ 'ನಿಮಗೆ ಡ್ರಾಪ್ ಕೊಡಲಾ?' ಎಂದು ಕೇಳಿದೆ. ಆದರೆ, ಅವಳು 'ನೋ ಥ್ಯಾಂಕ್ಸ್' ಎಂದು ಹೇಳಿ ಹೊರಟುಹೋದಳು. ಅಷ್ಟೇ... ಆ ಬಳಿಕ ನಾನು ಕಾಲೇಜಿಗೆ ಹೋಗಲಿಲ್ಲ. ಒಂದು ವಾರ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದೆ. ಒಂದು ದಿನ ಲ್ಯಾಂಡ್‌ಲೈನ್‌ಗೆ ಕರೆ ಬಂತು. ಹೇಗೋ ಮನೆ ನಂಬರ್ ತಿಳಿದುಕೊಂಡು ಅವಳೇ ಕರೆ ಮಾಡಿದ್ದಳು. ಅಲ್ಲಿಂದ ಇಬ್ಬರೂ ಮಾತನಾಡಲು ಶುರು ಮಾಡಿದೆವು" ಎಂದು ರವಿಚಂದ್ರನ್ ತಮ್ಮ ಪ್ರೇಮ ಪ್ರಸಂಗದ ರೋಚಕ ತಿರುವುಗಳನ್ನು ತೆರೆದಿಟ್ಟರು.
ಕ್ರೇಜಿಸ್ಟಾರ್ ಅವರ ಈ ಸುಂದರ ಪ್ರೇಮ ಕಥೆ ಕೇಳಿ ಬಿಗ್ ಬಾಸ್ ಮನೆಮಂದಿ ಸಂಪೂರ್ಣವಾಗಿ ಥ್ರಿಲ್ ಆಗಿದ್ದಾರೆ. ಈ ಸುಂದರ ಕ್ಷಣಗಳ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
PublicNext
18/12/2025 08:49 pm