ಕೆಜಿಎಫ್ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಕೀರ್ತನ್ ನಾಡಗೌಡ ಅವರ ಕುಟುಂಬದಲ್ಲಿ ದುರಂತ ಸಂಭವಿಸಿದೆ. ಅವರ ನಾಲ್ಕು ವರ್ಷದ ಪುತ್ರ, ಚಿರಂಜೀವಿ ಸೋನಾರ್ಷ್ ಕೆ.ನಾಡಗೌಡ ಲಿಫ್ಟ್ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾನೆ. ಈ ಘಟನೆ ಚಿತ್ರರಂಗದಲ್ಲಿ ತೀವ್ರ ಆಘಾತ ಮೂಡಿಸಿದೆ.
ಕೀರ್ತನ್ ನಾಡಗೌಡ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್ ದಂಪತಿಯ ಪುತ್ರ ಚಿರಂಜೀವಿ ಸೋನಾರ್ಷ್ ಕೆ.ನಾಡಗೌಡ, ಲಿಫ್ಟ್‌ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ. ಮಗುವನ್ನು ಉಳಿಸಲು ಸಾಕಷ್ಟು ಪ್ರಯತ್ನಗಳು ನಡೆದರೂ, ಅವು ಫಲಕಾರಿಯಾಗಲಿಲ್ಲ. ಈ ದುರಂತ ಘಟನೆ ಎಲ್ಲರನ್ನೂ ತೀವ್ರ ಆಘಾತಕ್ಕೆ ದೂಡಿದೆ.
ಈ ದುರಂತಕ್ಕೆ ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. 'ನಿರ್ದೇಶಕ ಕೀರ್ತನ್ ನಾಡಗೌಡರ ಮಗನ ದುರಂತ ಸಾವು ಹೃದಯವಿದ್ರಾವಕ. ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿರುವ ಕೀರ್ತನ್ ನಾಡಗೌಡರ ಕುಟುಂಬಕ್ಕೆ ಸಂಭವಿಸಿದ ಈ ದುರಂತ ನನ್ನನ್ನು ತೀವ್ರವಾಗಿ ದುಃಖಿತನನ್ನಾಗಿ ಮಾಡಿದೆ' ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕೀರ್ತನ್ ನಾಡಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಚಲನಚಿತ್ರ ನಿರ್ದೇಶಕ. 'ಕೆಜಿಎಫ್', 'ಕೆಜಿಎಫ್-2' ಮತ್ತು ಪ್ರಭಾಸ್ ನಟನೆಯ 'ಸಲಾರ್' ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿರುವ ಕೀರ್ತನ್, ಯಶ್ ಅಭಿನಯದ ಚಿತ್ರಗಳಿಗೆ ನೀಡಿದ ಕೊಡುಗೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
PublicNext
18/12/2025 08:18 pm