ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Exclusive ಬೆಂಗಳೂರು: ಮದುವೆ ಕನಸು ಕಂಡವರಿಗೆ ಶಾಕ್ - ಒಂದೇ ಹುಡುಗಿ ಹೆಸರಿನಲ್ಲಿ ಮೂವರು ಯುವಕರಿಗೆ 1.5 ಕೋಟಿ ವಂಚನೆ

ಬೆಂಗಳೂರು: ಮದುವೆಗೆ ಸಂಗಾತಿ ಹುಡುಕುತ್ತಿರುವವರು, ವಿಶೇಷವಾಗಿ ಆನ್‌ಲೈನ್ ಮ್ಯಾಟ್ರಿಮೋನಿ ಸೈಟ್‌ಗಳಾದ ಶಾದಿ.ಕಾಮ್ (Shaadi.com) ಮತ್ತು ಮ್ಯಾಟ್ರಿಮೋನಿ.ಕಾಮ್ (Matrimony.com) ಗಳಲ್ಲಿ ಹುಡುಗಿ ಹುಡುಕುತ್ತಿರುವವರು ಎಚ್ಚರದಿಂದ ಇರಿ. ಪರಿಚಯವಿಲ್ಲದ, ಗೊತ್ತುಗುರಿ ಇಲ್ಲದ ಹುಡುಗಿಯರೊಂದಿಗೆ ಚಾಟ್ ಮಾಡುವ ಮುನ್ನ ಎಚ್ಚರ ವಹಿಸದಿದ್ದರೆ ನಿಮ್ಮನ್ನು ಗುಡಿಸಿ ಗುಂಡಾಂತರ ಮಾಡಿಬಿಡುತ್ತಾರೆ. ಸೈಬರ್ ವಂಚಕರು ಮದುವೆಯ ನೆಪವೊಡ್ಡಿ ನಿಮ್ಮನ್ನು ಪರಿಚಯಿಸಿಕೊಂಡು ನಿಮ್ಮನ್ನು ಬರ್ಬಾದ್ ಮಾಡುತ್ತಾರೆ. ಈ ವಂಚಕರು ಆನ್‌ಲೈನ್ ಮದುವೆ ಪೋರ್ಟಲ್‌ಗಳಲ್ಲಿ ಅತ್ಯಾಕರ್ಷಕ ಮಾಡೆಲ್‌ಗಳ ಫೋಟೋಗಳನ್ನು ಬಳಸಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸುತ್ತಾರೆ. ಅವರ ಅಂದ-ಚೆಂದದ ಮಾತುಗಳಿಗೆ ಮರುಳಾದಲ್ಲಿ, ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪೂರ್ಣವಾಗಿ ಖಾಲಿ ಮಾಡುತ್ತಾರೆ. ಮೊದಲಿಗೆ, ಅವರು ಪೋಷಕರ ಸೋಗಿನಲ್ಲಿ ಮಾತನಾಡಿ, ಯುವಕರ ಉದ್ಯೋಗ ಮತ್ತು ಆದಾಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ಹಣವಂತ ಯುವಕರು ಸಿಕ್ಕರೆ, ಹುಡುಗಿಯ ಹೆಸರಿನಲ್ಲಿ ಚಾಟ್ ಮಾಡಲು ಪ್ರಾರಂಭಿಸುತ್ತಾರೆ.

ಇತ್ತೀಚೆಗೆ ಶಾದಿ.ಕಾಮ್‌ನಲ್ಲಿ ವಧು ಹುಡುಕುತ್ತಿದ್ದ ಮೂವರು ಯುವಕರಿಗೆ ಒಂದೇ ನಕಲಿ ಪ್ರೊಫೈಲ್‌ನಿಂದ ಬರೋಬ್ಬರಿ 1.5 ಕೋಟಿ ರೂಪಾಯಿ ವಂಚನೆಯಾಗಿದೆ. 'ಕಾರುಣ್ಯ ಆರ್' ಅಥವಾ 'ಕಾರುಣ್ಯ ರಾಘವ್' ಎಂಬ ಹೆಸರಿನಲ್ಲಿ ಈ ವಂಚನೆ ನಡೆದಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಈ 'ಕಾರುಣ್ಯ' ಮೂವರು ಯುವಕರನ್ನು ವಂಚಿಸಿದ್ದಾಳೆ. ಹುಡುಗಿಯಂತೆ ಚಾಟ್ ಮಾಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡುವ ಆಮಿಷವೊಡ್ಡಿದ್ದಾಳೆ.

ಮೊದಲಿಗೆ ಥೇಟ್ ಹುಡುಗಿ ಎಂದು ಮೆಸೇಜ್ ವಾಯ್ಸ್ ಕಾಲ್ ಮಾಡುವ ಇವರು ತಾನು ಅಬುದಾಬಿಯ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವುದಾಗಿ ನಂಬಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಅದು ಕೆಲವೇ ತಿಂಗಳಲ್ಲಿ ಡಬಲ್ ಆಗುತ್ತೆ. ಆಗ ಮದುವೆ ಗ್ರ್ಯಾಂಡ್ ಆಗಿ ಆಗಬಹುದು ಎಂದು ನಂಬಿಸುತ್ತಾರೆ. ಇದಕ್ಕಾಗಿ ಕೆಲವು ಲಿಂಕ್‌ಗಳು ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಳುಹಿಸಿ, ಯುವಕರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿದ್ದಾರೆ. ನಂತರ ತಮ್ಮದೇ ಗುಂಪಿನ ಒಬ್ಬನನ್ನು ಯುವಕರಿಗೆ ಪರಿಚಯಿಸಿ ಸಹಾಯ ಮಾಡುವ ಸೋಗಿನಲ್ಲಿ ಮತ್ತಷ್ಟು ಹಣ ಹೂಡಿಕೆಗೆ ಪ್ರೇರೇಪಿಸಿದ್ದಾರೆ. ಹೀಗೆ ತಲಾ 50 ಲಕ್ಷ ರೂಪಾಯಿ ಹೂಡಿಕೆಯಾದ ನಂತರ, ವಂಚಕರು ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದಾರೆ.

ಯುವಕರನ್ನು ಮೋಸಗೊಳಿಸಲು ಮಾಡೆಲ್ ಒಬ್ಬರ ಫೋಟೋಗಳನ್ನು ಬಳಸಿರುವ ಅನುಮಾನವಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಹುಡುಗಿಯಂತೆ ಮಾತನಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಒಂದೇ ನಕಲಿ ಖಾತೆ ಮೂಲಕ ಮೂವರು ಯುವಕರಿಗೆ ವಂಚನೆ ಮಾಡಲಾಗಿದೆ. ವೈಟ್‌ಫೀಲ್ಡ್ ಸಿಇಎನ್, ದಕ್ಷಿಣ ಸಿಇಎನ್ ಮತ್ತು ಬೆಂಗಳೂರು ಗ್ರಾಮಾಂತರ ಸಿಇಎನ್ ಠಾಣೆಗಳಲ್ಲಿ ಮೂವರು ಯುವಕರಿಂದ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮೂವರಿಗೂ ಒಂದೇ ಫೋನ್ ನಂಬರ್ ಮತ್ತು ಒಂದೇ ಹೆಸರಿನಲ್ಲಿ ವಂಚನೆ ನಡೆದಿರುವುದು ದೂರಿನಲ್ಲಿ ಉಲ್ಲೇಖವಾಗಿದೆ. ಮದುವೆಯ ಆಸೆಗೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ಯುವಕರು ಆಘಾತಕ್ಕೊಳಗಾಗಿದ್ದಾರೆ. ಅದನ್ನು ಹೇಳಿಕೊಳ್ಳಲೂ ಆಗದೇ, ಸುಮ್ಮನಿರಲೂ ಆಗದೇ ಪರಿತಪಿಸುತ್ತಿದ್ದಾರೆ. ಪೊಲೀಸರು ಈ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

Edited By : Manjunath H D
PublicNext

PublicNext

16/12/2025 12:09 pm

Cinque Terre

21.8 K

Cinque Terre

0

ಸಂಬಂಧಿತ ಸುದ್ದಿ