ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಸುರಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ; ಕುಖ್ಯಾತ ಬೈಕ್ ಕಳ್ಳ ‍& ಗ್ಯಾಂಗ್ ಸೆರೆ, 57 ಬೈಕ್ ವಶ

ಯಾದಗಿರಿ: ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನು ಬಂಧಿಸಿ 57 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ವಿಕ್ ಶಂಕರ್ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಎಸ್ಪಿ, ನಗರದ ಸತ್ಯಂಪೇಟೆಯ ನಿವಾಸಿ ನಿಂಗಪ್ಪ ಮಕಾಶಿ ಎಂಬವರು ಬೈಕ್ ಕಳೆದಿರುವ ಕುರಿತು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ, ಹುಣಸಗಿ ಪಟ್ಟಣದ ಮೌನೇಶ್ ಮತ್ತು ಸಹಚರರು ಸೇರಿಕೊಂಡು ಜಿಲ್ಲೆ ಹಾಗೂ ಹೊರ ಜಿಲ್ಲೆ, ರಾಜ್ಯಗಳಲ್ಲಿ ಹೋಂಡಾ ಶೈನ್ ಮತ್ತು ಸ್ಪ್ಲೆಂಡರ್ ಪ್ಲಸ್ ಸೇರಿ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ 57 ಬೈಕ್ ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರು.

ಬಂಧಿತ ಆರೋಪಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿಸಿ ಟಿವಿ ಇಲ್ಲದ ಕಡೆಗಳಲ್ಲಿ, ಬಳಕೆಯಾದ ಬೈಕ್‌ ಗಳನ್ನು ಕಳ್ಳತನ ಮಾಡಿರುವ ಮಾಹಿತಿ ಇದೆ. ಅವುಗಳ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು ಎಂದು ವಿವರಿಸಿದರು.

ಬಂಧಿತ ಆರೋಪಿಯೊಟ್ಟಿಗೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಆರು ಜನರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ವಿಕ್ ಶಂಕರ್ ಮಾರ್ಗದರ್ಶನದಲ್ಲಿ, ಸುರಪುರ ವಿಭಾಗದ ಡಿವೈಎಸ್ಪಿ ಜಾವೀದ್ ಇನಾಂದಾರ ನೇತೃತ್ವದಲ್ಲಿ, ಪಿಐ ಉಮೇಶ್ ಎಂ., ಪಿಎಸ್ಐ ಸಿದ್ದಣ್ಣ, ಕೃಷ್ಣ ಸುಬೇದಾರ್, ಸಿಬ್ಬಂದಿ ಸಣ್ಣಕೆಪ್ಪ, ನಾಗರಾಜ್ ಮಲ್ಲಯ್ಯ ಪ್ರಕಾಶ್ ಹುಸೇನ್ ಬಾಷಾ, ಲಕ್ಷ್ಮಣ ಜಗದೀಶ ಹುಲಿಗೆಪ್ಪ, ಗೋವಿಂದ ಆಂಜನೇಯ, ತಾಯಣ್ಣ ಮಲಕಾರಿ, ರಮೇಶ್ ಕಾಂಬ್ಳೆ ಪಿಐ ಬೆರಳಚ್ಚು ಘಟಕ ಸುರೇಶ್ ಸೇರಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಿರುವ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.

Edited By : Manjunath H D
PublicNext

PublicNext

25/01/2026 02:40 pm

Cinque Terre

16.74 K

Cinque Terre

0