ಬೆಂಗಳೂರು : ಬೆಂಗಳೂರಿನಲ್ಲಿ 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದ್ದು, ಜನವರಿ 29ರಂದು ಆರಂಭವಾದ ಈ ಉತ್ಸವ ಫೆಬ್ರವರಿ 6ರವರೆಗೆ ಮುಂದುವರೆಯಲಿದೆ. ಈಗಾಗಲೇ ಚಲನಚಿತ್ರೋತ್ಸವದ ರಾಯಭಾರಿ, ಬಹುಭಾಷಾ ನಟ ಪ್ರಕಾಶ್ ರಾಜ್ ಪ್ಯಾಲೆಸ್ಟೈನ್ ಚಿತ್ರ ಪ್ರದರ್ಶನಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುದ್ದಿಯಾಗಿದ್ದರು.
ಇದೀಗ ಬೆಂಗಳೂರು ಚಲನಚಿತ್ರೋತ್ಸವದ ರೂವಾರಿ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಹಾಸ್ಯ ನಟ ಸಾಧು ಕೋಕಿಲ ಅವರ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡಿದೆ.
ಸಾಧು ಕೋಕಿಲ ವಿರುದ್ಧ ಲಂಚದ ಆರೋಪ
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ವಿರುದ್ಧ ಪರಮ್ ಗುಬ್ಬಿ ಎಂಬುವರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ಆರೋಪ ಮಾಡಿದ್ದರು. ಚಲನಚಿತ್ರೋತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಪರಮ್ ಗುಬ್ಬಿ, ಸಾಧು ಕೋಕಿಲ ಮತ್ತು ಮುರಳಿ ಅವರಿಗೆ 3 ರಿಂದ 5 ಲಕ್ಷ ಲಂಚ ನೀಡಿದ್ದರೆ ನಮ್ಮ ಚಿತ್ರವೂ ಆಯ್ಕೆಯಾಗುತ್ತಿತ್ತು ಎಂದು ಆರೋಪಿಸಿದ್ದರು.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು ಹಾಗೂ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಬಿಜೆಪಿಯಿಂದ ಸರ್ಕಾರಕ್ಕೆ ಕಮಿಷನ್ ದಂಧೆಯ ನಂಟು!
ಪರಮ್ ಗುಬ್ಬಿ ಅವರ ಈ ಫೇಸ್‌ಬುಕ್ ಪೋಸ್ಟ್ ಅನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಾಧು ಕೋಕಿಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ವಿಧಾನಸೌಧದಿಂದ ಫಿಲ್ಮ್ ಚೇಂಬರ್‌ವರೆಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆ ಹಬ್ಬಿದೆ ಎಂದು ಬಿಜೆಪಿ ಆರೋಪಿಸಿದೆ.
PublicNext
03/02/2026 07:49 pm