ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏರ್ ಇಂಡಿಯಾದಲ್ಲಿ ಮತ್ತೆ ಕಾಡಿದ ಇಂಧನ ಸ್ವಿಚ್ ದೋಷದ ಭೀತಿ! - ಬೆಂಗಳೂರಿಗೆ ಬರುತ್ತಿದ್ದ ವಿಮಾನ ಲಂಡನ್‌ನಲ್ಲೇ ಸ್ಥಗಿತ

ಬೆಂಗಳೂರು: ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾ (Air India) ಬೋಯಿಂಗ್ 787-8 ಡ್ರೀಮ್‌ಲೈನರ್ (AI 132) ವಿಮಾನದ ಹಾರಾಟವನ್ನು ಇಂದು ಸ್ಥಗಿತಗೊಳಿಸಲಾಗಿದೆ.

ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಡುವ ಮುನ್ನ ಪೈಲಟ್, ವಿಮಾನದ ಕಾರ್ಯವಿಧಾನಗಳನ್ನು ಪರಿಶೀಲಿಸುತ್ತಿದ್ದಾಗ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೈಲಟ್ ತಕ್ಷಣವೇ ಏರ್ ಇಂಡಿಯಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಯಿತು.

ಏರ್ ಇಂಡಿಯಾ ಸ್ಪಷ್ಟನೆ

ಈ ಬಗ್ಗೆ ಏರ್ ಇಂಡಿಯಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. "ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಫ್ಯೂಯೆಲ್ ಕಂಟ್ರೋಲ್ ಸ್ವಿಚ್‌ನಲ್ಲಿ ಸಮಸ್ಯೆ ಇರುವ ಬಗ್ಗೆ ಮಾಹಿತಿ ನೀಡಿದ ಕೂಡಲೇ, ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂಬ ಕಾರಣಕ್ಕೆ ಆ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಕ್ಕೂ ಮಾಹಿತಿ ನೀಡಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಪಾಸಣೆ ನಂತರ ಯಾವುದೇ ಸಮಸ್ಯೆ ಇಲ್ಲ

ಆದರೆ, ಸಂಪೂರ್ಣ ಪರಿಶೀಲನೆಯ ನಂತರ ಆ ವಿಮಾನದಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಕವಾದ ಡಿಜಿಸಿಎಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಫ್ಲೀಟ್‌ನಾದ್ಯಂತ ತಪಾಸಣೆ

"ಡಿಜಿಸಿಎ ನಿರ್ದೇಶನದ ನಂತರ ಏರ್ ಇಂಡಿಯಾ ತನ್ನ ಫ್ಲೀಟ್‌ನಲ್ಲಿರುವ ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರಿಶೀಲಿಸಿದೆ. ಅದರಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಏರ್ ಇಂಡಿಯಾದಲ್ಲಿ ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ" ಎಂದು ಏರ್ ಇಂಡಿಯಾ ಹೇಳಿದೆ.

ಹಿಂದಿನ ದುರಂತದ ನೆನಪು

ಈ ಘಟನೆ, 2025ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಡ್ರೀಮ್‌ಲೈನರ್ ವಿಮಾನದ ಅಪಘಾತದ ನೆನಪುಗಳನ್ನು ಮರಳಿ ತಂದಿದೆ. ಆ ದುರಂತದಲ್ಲಿ 260 ಜನರು ಮೃತಪಟ್ಟಿದ್ದರು. ಆ ವಿಮಾನದಲ್ಲಿಯೂ ಫ್ಯೂಯೆಲ್ ಸ್ವಿಚ್ ಸಮಸ್ಯೆಯಿಂದಲೇ ಅಪಘಾತ ಸಂಭವಿಸಿತ್ತು ಎಂದು ವರದಿಯಲ್ಲಿ ಬಹಿರಂಗವಾಗಿತ್ತು. ಹೀಗಾಗಿ, ಇದೀಗ ಮತ್ತೆ ಅದೇ ಮಾದರಿಯ ಏರ್ ಇಂಡಿಯಾ ಡ್ರೀಮ್‌ಲೈನರ್ ಬೋಯಿಂಗ್ ವಿಮಾನದಲ್ಲಿ ಫ್ಯೂಯೆಲ್ ಸ್ವಿಚ್ ಸಮಸ್ಯೆ ಉಂಟಾಗಿದ್ದರಿಂದ, ವಿಮಾನಯಾನ ಸಿಬ್ಬಂದಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಾರಾಟವನ್ನು ಸ್ಥಗಿತಗೊಳಿಸಿದ್ದರು.

Edited By : Vijay Kumar
PublicNext

PublicNext

03/02/2026 11:51 am

Cinque Terre

33.7 K

Cinque Terre

0

ಸಂಬಂಧಿತ ಸುದ್ದಿ