ಬೀಜಿಂಗ್: ಜಾಗತಿಕ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಸಾಕ್ಷಿಯಾಗುತ್ತಿರುವ ಈ ಹೊತ್ತಿನಲ್ಲಿ,ಚೀನಾ ಅಧಿಕೃತವಾಗಿ 'ಹಾರುವ ಟ್ಯಾಕ್ಸಿ'ಗಳ (Flying Taxis) ಯುಗಕ್ಕೆ ನಾಂದಿ ಹಾಡಿದೆ. ಚೀನಾದ ನಾಗರಿಕ ವಿಮಾನಯಾನ ಸಂಸ್ಥೆಯು (CAAC) ಇಬ್ಬರು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸ್ವಯಂಚಾಲಿತ ಡ್ರೋನ್ ಟ್ಯಾಕ್ಸಿಗಳ ವಾಣಿಜ್ಯ ಕಾರ್ಯಾಚರಣೆಗೆ ಎರಡು ಪ್ರಮುಖ ಕಂಪನಿಗಳಿಗೆ ಪರವಾನಗಿ ನೀಡುವ ಮೂಲಕ ಈ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ.
ಈ ಐತಿಹಾಸಿಕ ಪರವಾನಗಿಯನ್ನು ಚೀನಾದ ಇಹಾಂಗ್ ಹೋಲ್ಡಿಂಗ್ಸ್ (EHang Holdings) ಮತ್ತು ಹೆಫಿ ಹೇ ಏರ್‌ಲೈನ್ಸ್ (Hefei Hey Airlines) ಕಂಪನಿಗಳು ಪಡೆದಿವೆ. ಇದರೊಂದಿಗೆ, ಜನಸಾಮಾನ್ಯರು ಇನ್ನು ಮುಂದೆ ಹಣ ನೀಡಿ ಈ ಹಾರುವ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ಟ್ಯಾಕ್ಸಿಗಳ ಪ್ರಮುಖ ವೈಶಿಷ್ಟ್ಯವೆಂದರೆ, ಇವು ಸಂಪೂರ್ಣವಾಗಿ ಸ್ವಯಂಚಾಲಿತವಾಗಿ (Autonomous) ಕಾರ್ಯನಿರ್ವಹಿಸುವುದರಿಂದ ಯಾವುದೇ ಪೈಲಟ್‌ನ ಅಗತ್ಯವಿರುವುದಿಲ್ಲ.
ಈ ನೂತನ ಡ್ರೋನ್ ಟ್ಯಾಕ್ಸಿಗಳು ಗಂಟೆಗೆ ಸರಾಸರಿ 100 ರಿಂದ 130 ಕಿ.ಮೀ. ವೇಗದಲ್ಲಿ ಹಾರಬಲ್ಲವು. ರಸ್ತೆಯಲ್ಲಿ ಗಂಟೆಗಟ್ಟಲೆ ತೆಗೆದುಕೊಳ್ಳುವ ದೂರವನ್ನು ಇವು ಕೇವಲ 10-15 ನಿಮಿಷಗಳಲ್ಲಿ ಕ್ರಮಿಸಿ ಸಮಯ ಉಳಿತಾಯ ಮಾಡಲಿವೆ. ಆರಂಭಿಕ ಹಂತದಲ್ಲಿ, ಪ್ರವಾಸಿ ತಾಣಗಳಲ್ಲಿ ಸೈಟ್‌ಸೀಯಿಂಗ್‌ಗಾಗಿ ಹಾಗೂ ನಗರದ ಪ್ರಮುಖ ಸ್ಥಳಗಳ ನಡುವೆ ಸಂಚಾರಕ್ಕಾಗಿ ಈ ಸೇವೆ ಲಭ್ಯವಾಗಲಿದೆ.
ಚೀನಾ ಸರ್ಕಾರದ ಈ ಮಹತ್ವದ ನಿರ್ಧಾರವು 'ಕಡಿಮೆ ಎತ್ತರದ ಆರ್ಥಿಕತೆ' (Low-altitude economy) ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕೇವಲ ಚೀನಾ ಮಾತ್ರವಲ್ಲದೆ, ಯುಎಇ ಮತ್ತು ಅಮೆರಿಕದಂತಹ ಮುಂದುವರಿದ ದೇಶಗಳಿಗೂ ಈ ಹಾರುವ ಟ್ಯಾಕ್ಸಿಗಳ ಸ್ಪರ್ಧೆಗೆ ಇಳಿಯಲು ಸಜ್ಜಾಗಿವೆ. ಭವಿಷ್ಯದಲ್ಲಿ ನಗರಗಳಲ್ಲಿನ ಟ್ರಾಫಿಕ್ ಸಮಸ್ಯೆಗಳಿಗೆ ಇದು ಅತ್ಯುತ್ತಮ ಮತ್ತು ಸುಸ್ಥಿರ ಪರಿಹಾರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
PublicNext
03/02/2026 06:39 pm