ನವದೆಹಲಿ : ಭಾರತ-ಅಮೆರಿಕ ನಡುವಿನ ಮಹತ್ವದ ವ್ಯಾಪಾರ ಒಪ್ಪಂದವು ಪಾಕಿಸ್ತಾನದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ. ಭಾರತದ ಮೇಲೆ ಶೇಕಡಾ 50ಕ್ಕೂ ಹೆಚ್ಚು ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ತಮ್ಮ ನೀತಿಯನ್ನು ಸಡಿಲಗೊಳಿಸಿ, ಸುಂಕವನ್ನು ಶೇಕಡಾ 18ಕ್ಕೆ ಇಳಿಸಿದ್ದಾರೆ.
ಈ ನಿರ್ಧಾರದಿಂದ ಹಲವು ಭಾರತೀಯ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದ್ದು, ಅಮೆರಿಕಕ್ಕೆ ಭಾರತದ ರಫ್ತು ಇನ್ನಷ್ಟು ಸುಗಮವಾಗಲಿದೆ. ಆದರೆ, ಈ ಬೆಳವಣಿಗೆ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಭಾರತದ ಮೇಲಿನ ಸುಂಕ ಇಳಿಕೆ ಅಮೆರಿಕ ನಿರ್ಧಾರಕ್ಕೆ ಪಾಕಿಸ್ತಾನ ಕಂಗಾಲಾಗಿದ್ದು, ಮುನೀರ್-ಷರೀಫ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದೆ.
ರಾಜತಾಂತ್ರಿಕ ಯಶಸ್ಸು ಮತ್ತು ಪಾಕ್ ನಾಯಕರ ವಿಫಲತೆ
ಟ್ರಂಪ್ ಅವರು ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ನಂತರ ಈ ಸುಂಕ ಇಳಿಕೆ ನಿರ್ಧಾರವನ್ನು ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಧಾನಿ ಮೋದಿ 'ಎಕ್ಸ್' (ಹಿಂದಿನ ಟ್ವಿಟರ್) ಮೂಲಕ ಟ್ರಂಪ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಮಹತ್ವದ ಒಪ್ಪಂದದ ಕುರಿತು ಪಾಕಿಸ್ತಾನದ ಜನಸಾಮಾನ್ಯರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಭಾರತ ತನ್ನ ದೇಶದ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಪಾಕಿಸ್ತಾನೀಯರು, ತಮ್ಮ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು ಡೋನಾಲ್ಡ್ ಟ್ರಂಪ್ ಅವರ ಕಾಲು ಹಿಡಿದು ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ವಿರುದ್ಧ ಪಾಕಿಸ್ತಾನದಲ್ಲಿ ಇಷ್ಟೊಂದು ವ್ಯಾಪಕ ಟ್ರೋಲ್ ನಡೆಯಲು ಬಲವಾದ ಕಾರಣಗಳಿವೆ. ಭಾರತದ ಮೇಲೆ ಶೇಕಡಾ 50ಕ್ಕೂ ಹೆಚ್ಚು ಸುಂಕ ವಿಧಿಸಿದ್ದರೂ, ಭಾರತ ಸದ್ದಿಲ್ಲದೆ ಕಾರ್ಯನಿರ್ವಹಿಸಿ ಸುಂಕ ಇಳಿಕೆಗೆ ಯಶಸ್ವಿಯಾಗಿದೆ. ಆದರೆ, ಪಾಕಿಸ್ತಾನ ತನ್ನ ದೇಶದ ಹಿತಾಸಕ್ತಿಗಳನ್ನು ಹಾಳು ಮಾಡಿಕೊಂಡಿದೆ ಎಂದು ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಷರೀಫ್ ಹೇಳಿಕೆ ಮತ್ತು ಟ್ರೋಲ್
ಇತ್ತೀಚೆಗೆ, ಪ್ರಧಾನಿ ಶೆಹಬಾಜ್ ಷರೀಫ್ ಅವರು ವಿಶ್ವದ ಮುಂದೆ ಭಿಕ್ಷೆ ಬೇಡಲು ತಮಗೆ ನಾಚಿಕೆಯಾಗುತ್ತಿದೆ, ಆದರೆ ಪಾಕಿಸ್ತಾನವನ್ನು ಮುನ್ನಡೆಸಲು ಭಿಕ್ಷೆ ಬೇಡುವುದನ್ನು ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ಪಾಕಿಸ್ತಾನದ ಜನ ಈ ಹೇಳಿಕೆಯನ್ನು ಉಲ್ಲೇಖಿಸಿ, ಷರೀಫ್ ಒಬ್ಬ "ಮೂರ್ಖ" ಎಂದು ಟ್ರೋಲ್ ಮಾಡುತ್ತಿದ್ದಾರೆ.
ದೇಶದ ಎಲ್ಲಾ ಸಂಪತ್ತನ್ನು ಮಾರಾಟ ಮಾಡಿ ಪಾಕಿಸ್ತಾನವನ್ನು ಈ ದುಸ್ಥಿತಿಗೆ ತಂದಿದ್ದಾರೆ ಎಂದು ವ್ಯಾಪಕವಾಗಿ ಟೀಕಿಸಲಾಗುತ್ತಿದೆ.
PublicNext
03/02/2026 08:15 pm