ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ: ಸಚಿವರ ರಾಜೀನಾಮೆಗೆ ವಿಪಕ್ಷಗಳ ಆಹೋರಾತ್ರಿ ಧರಣಿ!

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ವಿರೋಧ ಪಕ್ಷಗಳ ಶಾಸಕರು, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭೆಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಮಂಗಳವಾರ ರಾತ್ರಿಯಿಡಿ ನಡೆದ ಈ ಧರಣಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆ ಸದನದಲ್ಲಿಯೇ ಉಳಿದರು. ಕೆಲವರು ನಿದ್ದೆಗೆ ಜಾರಿದರೆ, ಇನ್ನು ಕೆಲವರು ತಾಳ ಮದ್ದಳೆಗಳನ್ನು ಹಿಡಿದು ಸದನದ ಮೆಟ್ಟಿಲುಗಳ ಮೇಲೆ ಕುಳಿತು ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ಉಪನಾಯಕ ವಿ. ಸುನೀಲ್ ಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ವಿರೋಧ ಪಕ್ಷಗಳ ಬಹುತೇಕ ಶಾಸಕರು ಈ ಆಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಆರ್. ಅಶೋಕ್ ಅವರ ಆರೋಪ, ಬೇಡಿಕೆಗಳು

ಧರಣಿ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷಾಧಾರಗಳನ್ನು ನೀಡಿದರೂ ಮುಖ್ಯಮಂತ್ರಿಗಳು ಸಚಿವ ತಿಮ್ಮಾಪುರ ಅವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ದೂರಿದರು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವರ ಬೆಂಬಲಕ್ಕೆ ಮುಖ್ಯಮಂತ್ರಿಗಳು ನಿಂತಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.

ಅಬಕಾರಿ ಹಗರಣದ ಹಣ ಅಸ್ಸಾಂ, ಕೇರಳ, ತಮಿಳುನಾಡು ಚುನಾವಣೆಗಳಿಗೆ ಹರಿದು ಹೋಗುತ್ತಿದೆ. ಅಲ್ಲದೆ, ಈ ಹಗರಣದ ಹಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಗೂ ಪಾಲು ಹೋಗುತ್ತಿದೆ ಎಂದು ಆರ್. ಅಶೋಕ್ ಗಂಭೀರ ಆರೋಪ ಮಾಡಿದರು.

ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ, ಲೈಸೆನ್ಸ್ ನೀಡಿಕೆ ಹಾಗೂ ಮದ್ಯದಂಗಡಿಗಳಿಂದ ಪ್ರತಿ ತಿಂಗಳು 15,000-20,000 ರೂಪಾಯಿ ವಸೂಲು ಮಾಡಲಾಗುತ್ತಿದೆ ಎಂದು ವಿವರಿಸಿದ ಅವರು, ಈ ಹಗರಣದ ಕುರಿತು ಸಿಬಿಐ ಅಥವಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ವಿಜಯೇಂದ್ರ ಎಚ್ಚರಿಕೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಅಬಕಾರಿ ಸಚಿವರ ಮೇಲೆ ನೇರ ಭ್ರಷ್ಟಾಚಾರದ ಆರೋಪ ಬಂದಿದ್ದರೂ, ಮುಖ್ಯಮಂತ್ರಿಗಳು ಅವರ ಬೆನ್ನಿಗೆ ನಿಂತಿರುವುದು ಐದಾರು ಸಾವಿರ ಕೋಟಿ ರೂಪಾಯಿಗಳ ಈ ಹಗರಣದಲ್ಲಿ ಹಲವರಿಗೆ, ಅದರಲ್ಲೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೂ ಪಾಲು ಹೋಗಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಭಂಡತನ ಪ್ರದರ್ಶಿಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ವಿಜಯೇಂದ್ರ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವರ ರಾಜೀನಾಮೆ ಪಡೆಯುವವರೆಗೂ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಆಹೋರಾತ್ರಿ ಧರಣಿಯನ್ನು ಮುಂದುವರಿಸಲಿವೆ ಎಂದು ಎಚ್ಚರಿಕೆ ನೀಡಿದರು.

Edited By : Vijay Kumar
PublicNext

PublicNext

04/02/2026 09:45 am

Cinque Terre

9.35 K

Cinque Terre

0

ಸಂಬಂಧಿತ ಸುದ್ದಿ