ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಕುರ್ಸಿಯಾಂಗ್ ಅರಣ್ಯ ವಲಯದಲ್ಲಿ ವನ್ಯಜೀವಿ ಪ್ರೇಮಿಗಳಿಗೆ ಮತ್ತು ಪರಿಸರ ತಜ್ಞರಿಗೆ ರೋಮಾಂಚನಕಾರಿ ಸುದ್ದಿಯೊಂದು ಲಭಿಸಿದೆ. ಡಾರ್ಜಿಲಿಂಗ್ ಜಿಲ್ಲೆಯ ಕುರ್ಸಿಯಾಂಗ್‌ನ ಬಗೋರಾ ಅರಣ್ಯ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಟ್ರ್ಯಾಪ್ ಕ್ಯಾಮೆರಾದಲ್ಲಿ ಅತೀ ವಿರಳವಾಗಿರುವ ಎರಡು ಕಪ್ಪು ಚಿರತೆಗಳು ಒಟ್ಟಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.
ಸಾಮಾನ್ಯವಾಗಿ ಕಪ್ಪು ಚಿರತೆಗಳು ಒಂಟಿಯಾಗಿ ಬದುಕುವ ಪ್ರಾಣಿಗಳಾಗಿವೆ. ಇಂತಹ ಸಂದರ್ಭದಲ್ಲಿ ಭಾರತದ ವನ್ಯಜೀವಿ ಇತಿಹಾಸದಲ್ಲಿ ಕಾಡಿನಲ್ಲಿ ಎರಡು ಕಪ್ಪು ಚಿರತೆಗಳು ಏಕಕಾಲಕ್ಕೆ, ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಇದು ವಿಜ್ಞಾನಿಗಳಲ್ಲಿ ಮತ್ತು ಅರಣ್ಯಾಧಿಕಾರಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಜಂಗಲ್ ಬುಕ್‌ನ 'ಬಘೀರಾ' ಪಾತ್ರವನ್ನು ನೆನಪಿಸುವ ಈ ಕಪ್ಪು ಚಿರತೆಗಳು, ತಮ್ಮ ದೇಹದಲ್ಲಿನ ಮೆಲನಿನ್ ಅಂಶ ಹೆಚ್ಚಿರುವ ಕಾರಣದಿಂದ ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಈ ಎರಡು ಚಿರತೆಗಳು ಬಹುಶಃ ತಾಯಿ-ಮರಿ ಇರಬಹುದು ಅಥವಾ ಒಡಹುಟ್ಟಿದವುಗಳಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಇದಲ್ಲದೆ, ಈ ಭಾಗದಲ್ಲಿ ಕಪ್ಪು ಸಾರಂಗ (Black Deer) ಮತ್ತು ಕಪ್ಪು ಜೇಡಗಳೂ (Black Spiders) ಪತ್ತೆಯಾಗಿರುವುದು ಈ ಪ್ರದೇಶದ ಜೈವಿಕ ವೈವಿಧ್ಯತೆಯ ಬಗ್ಗೆ ವಿಜ್ಞಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಈ ಅಪರೂಪದ ಪ್ರಾಣಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆಯು ಈ ಭಾಗದಲ್ಲಿ ಗಸ್ತು ತಿರುಗುವುದನ್ನು ಹೆಚ್ಚಿಸಿದೆ ಮತ್ತು ಹೆಚ್ಚಿನ ಸಂಖ್ಯೆಯ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸುತ್ತಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಈ ಸುಂದರ ದೃಶ್ಯವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಮೂಲಕ ಕುರ್ಸಿಯಾಂಗ್ ಅರಣ್ಯವು ಅಪರೂಪದ ವನ್ಯಜೀವಿಗಳ ತಾಣವಾಗಿ ಹೊರಹೊಮ್ಮುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
PublicNext
26/01/2026 08:58 pm