ಮಂಡ್ಯ: ಕಾಂಗ್ರೆಸ್ ಮುಖಂಡ ಎಲ್.ಆರ್. ಶಿವರಾಮೇಗೌಡರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್, "ಎಲ್.ಆರ್. ಶಿವರಾಮೇಗೌಡರದು ಬಚ್ಚಲು ಬಾಯಿ, ಅಂಬರೀಷ್ ವಿರುದ್ಧ ಆಡಿರುವ ಅವಹೇಳನಕಾರಿ ಮಾತಿಗೆ ಕೂಡಲೇ ಕ್ಷಮಾಪಣೆ ಕೇಳಬೇಕು" ಎಂದು ಆಗ್ರಹಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೇಲೂರು ಸೋಮಶೇಖರ್, "ಅಂಬರೀಷ್ ಅವರ ಹೆಸರು ಬಳಸಿಕೊಂಡು, ಅವರ ಕಾಲು ಹಿಡಿದು ದುಡ್ಡು ಮಾಡಿಕೊಂಡು ರಾಜಕೀಯವಾಗಿ ಮೇಲೆ ಬಂದ ಎಲ್.ಆರ್. ಶಿವರಾಮೇಗೌಡರು, ಅವರಿಗೆ ಸಿಕ್ಕ ಅಧಿಕಾರವನ್ನೂ ಉಳಿಸಿಕೊಳ್ಳಲಿಲ್ಲ.
ಆದರೆ, ಅಂಬರೀಷ್ ನಿಧನರಾದ ನಂತರ ಅವರ ವಿರುದ್ಧ ಮಾತನಾಡುತ್ತಿರುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ" ಎಂದು ತೀವ್ರ ವಾಗ್ದಾಳಿ ನಡೆಸಿದರು.
ಶಿವರಾಮೇಗೌಡರು ಕೂಡಲೇ ಅಂಬರೀಷ್ ಭಾವಚಿತ್ರ ಹಿಡಿದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಸೋಮಶೇಖರ್ ಒತ್ತಾಯಿಸಿದರು.
ಒಂದು ವೇಳೆ ಕ್ಷಮಾಪಣೆ ಕೇಳದಿದ್ದರೆ, ಬೆಂಗಳೂರಿನಲ್ಲಿರುವ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು. ಅದಕ್ಕೂ ಬಗ್ಗದಿದ್ದರೆ, ಉಗ್ರ ಪ್ರತಿಭಟನೆ ನಿರಂತರವಾಗಿ ನಡೆಯುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಇದೇ ವೇಳೆ, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧವೂ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. "ಡಿ.ಕೆ. ಶಿವಕುಮಾರ್ ಅವರ ನೆಂಟ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಇನ್ನೂ ಶಿವರಾಮೇಗೌಡರನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ" ಎಂದು ಆರೋಪಿಸಿದರು.
ಅಲ್ಲದೆ, "ಜಿಲ್ಲೆಯ ಹಿರಿಯ ರಾಜಕೀಯ ಮುತ್ಸದ್ದಿ ಜಿ. ಮಾದೇಗೌಡರ ಬಗ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಬಗ್ಗೆಯೂ ಕೀಳಾಗಿ ಮಾತನಾಡಿದ ಶಿವರಾಮೇಗೌಡರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು" ಎಂದು ಬೇಲೂರು ಸೋಮಶೇಖರ್ ಆಗ್ರಹಿಸಿದರು.
PublicNext
29/01/2026 06:00 pm