ಸಾಗರ : ಈತನಕ ಬಸ್ ಸೌಲಭ್ಯವನ್ನೇ ಕಾಣದ ಕುಗ್ರಾಮ ಮರಾಠಿಗೆ ಬಸ್ ಸೌಲಭ್ಯ ಮೊದಲ ಬಾರಿಗೆ ಕಲ್ಪಿಸಲಾಗಿದೆ. ಇದರಿಂದಾಗಿ ಜನರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿದ ತೃಪ್ತಿ ನಮಗೆ ಇದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಸೋಮವಾರ ಸಾಗರ-ಸಿಗಂದೂರು ಮತ್ತು ಸಾಗರ ನಗರ ಸಾರಿಗೆ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಿಗಂದೂರು ಸೇತುವೆ ಆದ ನಂತರ ಹಿನ್ನೀರ ಭಾಗದ ಜನರು ನಮ್ಮ ಭಾಗಕ್ಕೆ ಸರ್ಕಾರಿ ಬಸ್ ಬರುತ್ತಿಲ್ಲ. ಇದರಿಂದ ಗ್ಯಾರಂಟಿ ಸೌಲಭ್ಯ ನಮಗೆ ಪಡೆಯಲು ಆಗುತ್ತಿಲ್ಲ ಎಂದು ಮಹಿಳೆಯರು ಸಹ ದೂರಿದ್ದರು. ಇದನ್ನು ಮನಗಂಡು ಸಿಗಂದೂರಿಗೆ ನೂತನ ಬಸ್ ಸೌಲಭ್ಯ ಒದಗಿಸಿದೆ. ಮರಾಠಿಯಂತಹ ಕುಗ್ರಾಮಕ್ಕೂ ಬಸ್ ಸೌಲಭ್ಯ ಸಿಕ್ಕಂತೆ ಆಗಿದೆ. ಜನರಿಗೆ ಸಾರಿಗೆ ಸಂಪರ್ಕ ಸಿಕ್ಕರೆ ಅವರ ಬದುಕು ಸುಧಾರಿಸುತ್ತದೆ ಎಂದು ತಿಳಿಸಿದರು.
ನಗರ ಸಾರಿಗೆ ಬೇಕು ಎನ್ನುವುದು ಬಹಳ ಜನರ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರಿಗೆ ಮನವಿ ಮಾಡಿಕೊಂಡ ಮೇರೆಗೆ ಒಂದು ನಗರ ಸಾರಿಗೆ ಬಸ್‌ಗೆ ಅವಕಾಶ ಕಲ್ಪಿಸಿದ್ದಾರೆ. ನಗರವ್ಯಾಪ್ತಿಯಲ್ಲಿ ಸಾರ್ವಜನಿಕರು ಓಡಾಡಲು ಇದರಿಂದ ಅನುಕೂಲವಾಗಲಿದೆ. ರಾಮನಗರ, ಇಕ್ಕೇರಿ ವೃತ್ತ, ಜೋಗ ರಸ್ತೆ ಸೇರಿ ಬೇರೆಬೇರೆ ಭಾಗಗಳಲ್ಲಿ ನಗರ ಸಾರಿಗೆ ಸಂಚರಿಸಲಿದ್ದು, ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತವಾಗಿ ಸಂಚರಿಸಲು ಅವಕಾಶವಿದೆ ಎಂದು ಹೇಳಿದರು.
ಬಸ್ ಡ್ರೈವಿಂಗ್ ಮಾಡಿದ ಶಾಸಕ ಬೇಳೂರು: ಇನ್ನು ಶಾಸಕ ಬೇಳೂರು ಗೋಪಾಲಕೃಷ್ಣ ತಾವೇ ಸ್ವತಃ ಕೆಎಸ್ಆರ್ಟಿಸಿ ಬಸ್ ಡ್ರೈವಿಂಗ್ ಮಾಡಿಕೊಂಡು ಸ್ವಲ್ಪ ದೂರ ತೆಗೆದುಕೊಂಡು ಹೋಗುವ ಮೂಲಕ ಚಾಲನೆ ನಡೆದು ವಿಶೇಷವಾಗಿತ್ತು.
ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಸುರೇಶ್ ಬಾಬು, ಗಣಪತಿ ಮಂಡಗಳಲೆ, ಚೇತನರಾಜ್ ಕಣ್ಣೂರು, ಮಧುಮಾಲತಿ, ದೇವರಾಜ್, ಕನ್ನಪ್ಪ, ಕೆ.ಎಸ್.ಆರ್.ಟಿ.ಸಿ.ಯ ಶ್ರೀಶೈ¯ ಬಿರಾದಾರ್, ರಾಜಪ್ಪ ಇನ್ನಿತರರು ಹಾಜರಿದ್ದರು.
Kshetra Samachara
02/02/2026 04:12 pm