ಶಿವಮೊಗ್ಗ : ರಾಜ್ಯ ಸರ್ಕಾರವು ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸುವುದಕ್ಕಾಗಿ ತುರ್ತು ಅಧಿವೇಶನ ಕರೆದಿದೆ. ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸುವ ಕೆಲಸವನ್ನು ಈ ಸರ್ಕಾರ ಮಾಡಿದೆ ಎಂದು ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ ಸರ್ಜಿ ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರ್ಕಾರ ಸುಳ್ಳನ್ನು ಮುತ್ತಿನ ಹಾರದಂತೆ ಪೋಣಿಸಿ ರಾಜ್ಯದ ಜನರ ಕೊರಳಿಗೆ ಹಾಕಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಜನರೇ ತಕ್ಕ ಉತ್ತರ ಕೊಡುತ್ತಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ರಾಜ್ಯದ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿತ್ತು. ಆದರೆ ಎರಡು ಮುಕ್ಕಾಲು ವರ್ಷವಾದರೂ ಉದ್ಯೋಗ ನೀಡಿಲ್ಲ. ರಾಜ್ಯದಲ್ಲಿ 2,80,000 ಹುದ್ದೆಗಳು ಖಾಲಿ ಉಳಿದಿವೆ.
ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದ ಯುವಕರಿಗೆ ಉದ್ಯೋಗದ ಗ್ಯಾರಂಟಿ ಕೊಡುವುದು ಯಾರು? ಜೀವನದ ಗ್ಯಾರಂಟಿ ಕೊಡುವುದು ಯಾರು ಎಂದು ಪ್ರಶ್ನಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ 2018ರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 3,000ದಿಂದ 4,500ಕ್ಕೆ ಹೆಚ್ಚಿಸಿತ್ತು. ಅಂಗನವಾಡಿ ಸಹಾಯಕಿಯರ ಗೌರವ ಧನವನ್ನು 2,250 ರಿಂದ 3,500ರವರೆಗೆ ಹೆಚ್ಚಿಸಿತ್ತು. ಅತಿಥಿ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಕಾನೂನಿನಲ್ಲಿ ತಿದ್ದುಪಡಿ ಮಾಡಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ತಿದ್ದುಪಡಿ ಮಾಡುವುದಿರಲಿ 25 ವರ್ಷ ಸೇವೆ ಸಲ್ಲಿಸಿರುವ 6,000 ಅತಿಥಿ ಉಪನ್ಯಾಸಕರನ್ನು ಬೀದಿಗಿಳಿಸಿದೆ ಎಂದು ದೂರಿದರು.ಹಾಲಿನ ಪ್ರೋತ್ಸಾಹ ಧನವನ್ನು 5ರಿಂದ 7ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದರೂ, 38,000 ಕೋಟಿ ಬಾಕಿ ಉಳಿಸಿಕೊಂಡಿದೆ. ಹಾಲು ಉತ್ಪಾದಕರ ಬಾಕಿ ಹಣ ನೀಡಿಲ್ಲ ಎಂದೂ ಆರೋಪಿಸಿದರು.
PublicNext
03/02/2026 07:32 pm