ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆರೋಪಿಗಳಿಗೆ ನೆರವು, ದೂರುದಾರರಿಗೆ ಕಿರುಕುಳ ನೀಡಿದ ಇಬ್ಬರು ಕಾನ್‌ಸ್ಟೆಬಲ್‌ಗಳು ಅಮಾನತು!

ಬೆಂಗಳೂರು: ಕರ್ತವ್ಯಲೋಪ ಆರೋಪದ ಮೇಲೆ ಕೆ.ಪಿ.ಅಗ್ರಹಾರ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಹರೀಶ್‌ ಕುಮಾರ್‌ ಮತ್ತು ಮಸೂದಿ ಅಮಾನತುಗೊಂಡ ಕಾನ್‌ಸ್ಟೇಬಲ್‌ಗಳು. ಇಬ್ಬರ ಕರ್ತವ್ಯಲೋಪದ ಬಗ್ಗೆ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌ ಪಶ್ಚಿಮ ವಿಭಾಗ ಡಿಸಿಪಿ ಯತೀಶ್‌ ಗೆ ವರದಿ ನೀಡಿದ್ದರು. ಈ ಆರೋಪದ ಮೇಲೆ ಇಬ್ಬರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ, ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ವಂಚನೆ ಪ್ರಕರಣಗಳ ಆರೋಪಿಗಳು, ರೌಡಿಶೀಟರ್‌ಗಳ ವಿರುದ್ಧ ಹೊರಡಿಸುವ ವಾರೆಂಟ್‌ಗಳ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿ, ಅವರನ್ನು ತಪ್ಪಿಸಿಕೊಳ್ಳುವಂತೆ ಮಾಡುತ್ತಿದ್ದರು. ಕೋರ್ಟ್‌ನಲ್ಲಿ ದಿನಾಂಕ ಮುಂದೂಡಿಕೆ ಮಾಡಿಸಲು ನೆರವಾಗುತ್ತಿದ್ದರು. ಇದರೊಂದಿಗೆ ಕೆಲ ಪ್ರಕರಣಗಳ ದೂರುದಾರರಿಗೆ ತೊಂದರೆ ಕೊಡುತ್ತಿದ್ದರು. ಠಾಣೆಯಲ್ಲಿರುವ ವಾರೆಂಟ್‌ ಪುಸ್ತಕವನ್ನು ಸರಿಯಾಗಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ಮಾಡಿ, ಲಾಭ ಪಡೆಯುತ್ತಿದ್ದರು. ಜತೆಗೆ ಅಮಾನತುಗೊಂಡಿರುವ ಠಾಣಾಧಿಕಾರಿ ಗೋವಿಂದರಾಜುಗೆ ಪರೋಕ್ಷವಾಗಿಯೂ ಲಾಭ ಮಾಡಿಕೊಡುತ್ತಿದ್ದರು. ಇತ್ತೀಚೆಗೆ ಠಾಣಾ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಇಬ್ಬರು ಕಾನ್‌ಸ್ಟೇಬಲ್‌ಗಳ ಕರ್ತವ್ಯಲೋಪ ಬೆಳಕಿಗೆ ಬಂದಿತ್ತು.

ಈ ಸಂಬಂಧ ಎಸಿಪಿ ಚಂದನ್‌ ಇಬ್ಬರ ವಿರುದ್ಧ ಆಂತರಿಕ ತನಿಖೆ ನಡೆಸಿದಾಗ ಉದ್ದೇಶಪೂರ್ವಕವಾಗಿಯೇ ಕರ್ತವ್ಯ ಎಸಗಿರುವುದು ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ಆಧಾರದ ಮೇಲೆ ಇಬ್ಬರು ಕಾನ್‌ಸ್ಟೇಬಲ್‌ಗಳ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ಠಾಣೆಯಲ್ಲಿ ಪ್ರಕರಣವೊಂದರಲ್ಲಿ ಉದ್ಯಮಿಯಿಂದ 4 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಠಾಣಾಧಿಕಾರಿ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದು, ಅಮಾನತುಗೊಂಡಿದ್ದರು. ಇದೀಗ ಅದೇ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳು ಅಮಾನತುಗೊಂಡಿದ್ದಾರೆ.

Edited By : Vijay Kumar
PublicNext

PublicNext

04/02/2026 06:35 am

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ